ಗೋ ಆಂದೋಲನ ನೈಜ ಸ್ವಾತಂತ್ರ್ಯ ಸಂಗ್ರಾಮ – ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

ರಾಜ್ಯ ಗೋ ಪರಿವಾರದ ಉದ್ಘೋಷಣೆ ಸಂದರ್ಭ
ರಾಜ್ಯ ಗೋ ಪರಿವಾರದ ಉದ್ಘೋಷಣೆ ಸಂದರ್ಭ

ಬೆಂಗಳೂರು: ಕರ್ನಾಟಕ ರಾಜ್ಯವನ್ನು ಗೋಹತ್ಯೆ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯ ಗೋ ಪರಿವಾರ ಕಾರ್ಯೋನ್ಮುಖವಾಗಲಿದೆ. ಇದು ನೈಜ ಸ್ವಾತಂತ್ರ್ಯ ಸಂಗ್ರಾಮ ಎಂದು ಶ್ರೀಮದ್‍ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಸ್ವಾಮೀಜಿ ನುಡಿದರು.

ರಾಜ್ಯ ಗೋ ಪರಿವಾರದ ಉದ್ಘೋಷಣೆ ಮತ್ತು ಮೊದಲ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಹಸುವಿನ ಎಲ್ಲ ಆಯಾಮಗಳನ್ನು ಒಳಗೊಂಡ ಸರ್ವಾಂಗೀಣ ಸಂಘಟನೆ ಇದಾಗಿದೆ. ಹಸು ಸಂಸ್ಕøತಿ, ವಿಜ್ಞಾನ, ಆರೋಗ್ಯ, ಧರ್ಮ ಹೀಗೆ ಎಲ್ಲ ಅಂಶಗಳನ್ನು ಇದು ಒಳಗೊಳ್ಳುತ್ತದೆ.
ರಾಜ್ಯದಲ್ಲಿ ಗೋ ಸಂತತಿ ರಕ್ಷಣೆ ಮತ್ತು ಸಂವರ್ಧನೆಗಾಗಿ ಗೋ ಬ್ಯಾಂಕ್, ಮೇವು ಬ್ಯಾಂಕ್, ಗವ್ಯೊದ್ಯಮ, ಗೋ ಮಹತಿ, ಗೋಕಲಾ, ರೈತ ಗೋಪರಿವಾರ, ಗೋರಕ್ಷಕ, ಗೋಕಿಂಕರ ಹೀಗೆ ಹಲವು ವಿಭಾಗಗಳು ಕಾರ್ಯೋನ್ಮುಖವಾಗಲಿವೆ. ರಾಜ್ಯದಲ್ಲಿ ಗೋ ಪರಿವಾರದಡಿ ಕನಿಷ್ಠ 2.5 ಲಕ್ಷ ಕಾರ್ಯಕರ್ತರರನ್ನು ಸಂಘಟಿಸಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ 13.5 ರೂಪಾಯಿ ದರದಲ್ಲಿ ಮೇವು ಖರೀದಿಸುತ್ತಿದೆ. ಆದರೆ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀಮಠದ ವತಿಯಿಂದ 3.5 ರೂಪಾಯಿ ವೆಚ್ಚದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಸುಗಳಿಗೆ ಹಸಿರು ಹುಲ್ಲು ಒದಗಿಸಲಾಗಿದೆ. ಇದು ಸರ್ಕಾರ ಮತ್ತು ಶ್ರೀಮಠದ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಇದುವರೆಗೆ ಸುಮಾರು 3000 ಟನ್ ಹುಲ್ಲನ್ನು ರಾಜ್ಯದ ಜನರ ಸಹಕಾರದಿಂದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಹಳ್ಳಿಗಳಲ್ಲಿ ವಿತರಿಸಲಾಗಿದೆ ಎಂದರು.
ಕಟುಕರಿಂದ ನಿಯಂತ್ರಿಸಲ್ಪಡುವ ಜಾನುವಾರು ಸಂತೆಗಳಿಗೆ ಪರ್ಯಾಯವಾಗಿ ಮಾರುಕಟ್ಟೆ ನಿರ್ಮಾಣ, ತಳಿ ಸಂವರ್ಧನಾ ಕೇಂದ್ರಘಳ ಸ್ಥಾಪನೆ, ಪ್ಲಾಸ್ಟಿಕ್ ಮುಕ್ತ ರಸ್ತೆಗಾಗಿ ಅಮೃತಪಥ ಹಾಗೂ ಪ್ಲಾಸ್ಟಿಕ್ ಸೇವಿಸಿದ ಹಸುಗಳಿಗೆ ಶಸ್ತ್ರಚಿಕಿತ್ಸೆ ನೀಡುವ ಸಲುವಾಗಿ ಅಮೃತಗರ್ಭ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸದ್ಯದಲ್ಲೇ ಜಿಲ್ಲಾ, ತಾಲೂಕು ಮತ್ತು ಗ್ರಾಮಮಟ್ಟದ ಗೋ ಪರಿವಾರಗಳು ರಚನೆಯಾಗಲಿದ್ದು, ಈ ಮಾದರಿಯನ್ನು ಮುಂದಿನ ವರ್ಷಗಳಲ್ಲಿ ದೇಶದ ಇತರ ರಾಜ್ಯಗಳಿಗೂ ವಿಸ್ತರಿಸುವ ಯೋಚನೆ ಇದೆ. ಕರ್ನಾಟಕ ಗೋಸಂರಕ್ಷಣೆಯ ಪ್ರಯೋಗಭೂಮಿಯಾಗಬೇಕು ಎಂದು ಸ್ವಾಮೀಜಿ ಆಶಿಸಿದರು.
ರಾಜ್ಯ ಗೋ ಪರಿವಾರದ ಅಧ್ಯಕ್ಷ ಶ್ರೀ ಪಾಂಡುರಂಗ ಜೋಶಿ, ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಪದಾಧಿಕಾರಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.