ಗಂವ್ಹಾರ ಮಠದಲ್ಲಿ ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಪಂಚಗವ್ಯ ಪ್ರಶಿಕ್ಷಣ ತರಬೇತಿ ಶಿಬಿರ : ಉದ್ಘಾಟನೆ ಮತ್ತು ಮೊದಲ ದಿನ

ನಮ್ಮ ಸಮೃದ್ಧಿಗಾಗಿ ಹಾಗೂ ಗೋವುಗಳ ಉಳಿವಿಗಾಗಿ ಪಂಚಗವ್ಯ ಬಳಸಿ ಮಾತೆಯ ಋಣ ತೀರಿಸಬೇಕು ಎಂದು ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಪರಮಪೂಜ್ಯ ಶ್ರೀಶ್ರೀ ಸೋಪಾನನಾಥ ಮಹಾಸ್ವಾಮಿಗಳು ಹೇಳಿದರು. ಅವರು ಇಂದು‌ ‘ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ’ ಘಟಕದ ವತಿಯಿಂದ ನಡೆಯುತ್ತಿರುವ ಪಂಚಗವ್ಯ ಪ್ರಶಿಕ್ಷಣ ಶಿಬಿರವನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.

“ಅನಾದಿಕಾಲದಿಂದಲೂ ಗೋಜನ್ಯ ವಸ್ತುಗಳನ್ನು ದಿನನಿತ್ಯದ ಜೀವನದಲ್ಲಿ ಬಳಸಿಕೊಂಡು ಬಂದಿದ್ದು ಈಗ ಅದನ್ನು ಮತ್ತೆ ಹೇಳಿಕೊಡುವ ಸಂದರ್ಭ ಬಂದಿರುವುದು ವಿಷಾದನೀಯ. ಜೀವನದಿಂದ ಗೋವುಗಳು ದೂರವಾದ ಆಗೆ ಗವ್ಯೋತ್ಪನ್ನಗಳೂ ದೂರ ಆಗಿವೆ. ಅವುಗಳನ್ನು ನಾವು ಮರೆತಿದ್ದೇವೆ. ಆದರೆ ಇದೀಗ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ದೇಶಾದ್ಯಂತ ಗೋಜಾಗೃತಿ ಮೂಡಿಸುವಲ್ಲಿ ಅವಿರತ ಶ್ರಮಿಸುತ್ತಿದ್ದು ಅದರ ಭಾಗವಾಗಿ ಈ ಗವ್ಯೋತ್ಪನ್ನ ತರಬೇತಿ ಶಿಬಿರ ಏರ್ಪಡಿಸಿದ್ದು ಶ್ಲಾಘನೀಯ ಕಾರ್ಯ” ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಕರ್ನಾಟಕ ರಾಜ್ಯ ಗೋಪರಿವಾರದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಪಾಂಡುರಂಗ ಮಹಾರಾಜರು ಮಾತನಾಡುತ್ತಾ “ಗೋವುಗಳಿಂದ ವಿಮುಖರಾದ ನಾವು ಗೋವುಗಳ ಮಹತ್ವವನ್ನು ಅರಿಯಲು ವಿಫಲವಾಗುತ್ತಿದ್ದೇವೆ. ಗೋವು ಪರೋಪಕಾರಕ್ಕಾಗಿ ಜೀವನ ಸವೆಸುತ್ತದೆ. ನಾನಾ ಬಗೆಯ ಉಪಯೋಗಗಳು ಗೋವಿನ ಸಾಮೀಪ್ಯದಿಂದ ನಮಗೆ ದೊರಕುತ್ತದೆ. ಅವುಗಳನ್ನು ಅರಿತು ನಾವು ನಮ್ಮ ಆರೋಗ್ಯ ವೃದ್ಧಿ ಜೀವನ ಸಮೃದ್ಧಿ ಮಾಡಿಕೊಳ್ಳಬಹುದು. ಇದರ ಜಾಗೃತಿಗಾಗಿ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ‘ಭಾರತೀಯ ಗೋಪರಿವಾರ’ ಎಂಬ ಸಂಘಟನೆ ಸ್ಥಾಪಿಸಿ ನಾಡಿನಾದ್ಯಂತ ಗೋವಿನ ಮಹತ್ವವನ್ನು ತಲುಪಿಸುತ್ತಾ, ಗೋರಕ್ಷಣೆಗೆ ಒತ್ತು ಕೊಡುತ್ತಿದ್ದಾರೆ” ಎಂದರು

ರಾಜ್ಯ ಗೋಪರಿವಾರದ ಸಂಘಟನಾ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ ಅವರು ವಂದಿಸಿದರು. ಭಾರತೀಯ ಗೋಪರಿವಾರದ ಶ್ರೀಕಾರ್ಯದರ್ಶಿ ಮಧು ಗೋಮತಿ ನಿರೂಪಿಸಿದರು.

ನಂತರ ಶಿಬಿರದ ಮೊದಲ ಭಾಗದಲ್ಲಿ ಗೋಮಯ ಖಂಡ ಹಾಗೂ ಫಿನಾಯಿಲ್ ತಯಾರಿಸುವುದನ್ನು ಶ್ರೀಮತಿ ಸುಲೋಚನಾ ಅವರು ತರಬೇತಿ ನೀಡಿದರೆ, ರಾಜ್ಯ ಗೋಪರಿವಾರದ ಪಂಚಗವ್ಯ ಚಿಕಿತ್ಸೆಯ ರಾಜ್ಯಾಧ್ಯಕ್ಷ ಡಾ|| ರವಿ ಅವರು ಉತ್ಪನ್ನಗಳ ಬಳಕೆ ಮತ್ತು ಪರಿಣಾಮದ ಕುರಿತು ಪೂರಕ ಮಾಹಿತಿ ನೀಡಿದರು.

ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳು ನೋವಿನ ಮುಲಾಮು – ನಿವೇದನಾ, ಚರ್ಮದ ಒಡಕಿನ ಮುಲಾಮ್ – ಸುಚರಣ, ಕೇಶ ತೈಲ, ಶಮನ ತೈಲ ಸೇರಿದಂತೆ ನಾಲ್ಕಾರು ಉತ್ಪನ್ನಗಳ ತಯಾರಿಯನ್ನು ಪ್ರಾಯೋಗಿಕವಾಗಿ ಅರಿತರು. ತಾವೇ ಸ್ವತಃ ತಯಾರಿಸುವ ಮೂಲಕ ಸಂತಸಪಟ್ಟರು‌‌. ತಯಾರಿಸಿದ ಉತ್ಪನ್ನಗಳನ್ನು ಸ್ವತಃ ಬಳಸಿ ತಕ್ಷಣದ ಪರಿಣಾಮ ನೋಡಿ ಶಿಬಿರಾರ್ಥಿಗಳು ಆಶ್ಚರ್ಯಚಕಿತರಾದರು.

ಕೊನೆಯ ಅವಧಿಯಲ್ಲಿ ಡಾ|| ರವಿ ಭಾರತೀಯ ಗೋತಳಿಗಳ ವಿಶೇಷತೆಗಳನ್ನು ಸವಿಸ್ತಾರವಾಗಿ ಪ್ರಸ್ತುತಪಡಿಸಿದರು. ವಿವಿಧ ತಳಿಗಳ ಲಭ್ಯತೆ, ಹಾಲಿನಲ್ಲಿನ ಪೌಷ್ಟಿಕತೆ, ಗೋಮೂತ್ರ ಗೋಮಯಗಳಲ್ಲಿನ ಔಷದೀಯ ಗುಣಗಳನ್ನು ವಿವರಿಸಿದರು. ಶಿಬಿರಾರ್ಥಿಗಳು ತಮ್ಮ ಅನುಭವಗಳ‌ ಜೊತೆಗೆ ತಾವು ಎದುರಿಸಿದ ಸಮಸ್ಯೆಗಳನ್ನು ವ್ಯಕ್ತಪಡಿಸಿದರು. ಡಾ|| ರವಿ ಅವರು ವೈಯಕ್ತಿಕವಾಗಿ ಶಿಬಿರಾರ್ಥಿಗಳ ಜೊತೆಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿದರು.

ಪೂಜ್ಯ ತ್ರಿವಿಕ್ರಾಮನಂದ ಸರಸ್ವತಿ ಸ್ವಾಮಿಗಳ ಸನ್ನಿಧಿಯಲ್ಲಿ, ಪೂಜ್ಯ ಷ್ರೋ.ಬ್ರ. ಶ್ರೀ ಸೋಪಾನನಾಥ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಸಂಧ್ಯಾಸಮಯದ ಭಜನೆಯೊಂದಿಗೆ ಶಿಬಿರದ ಮೊದಲ ದಿನ ಸಂಪನ್ನವಾಯಿತು.