ಗೋಪಾಷ್ಟಮಿ ಮತ್ತು ಗೋಹತ್ಯಾ ನಿಷೇಧದ ಹೋರಾಟ

1966 ನೇ ಇಸವಿ, ನವೆಂಬರ್ 7, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗೋಹತ್ಯಾ ನಿಷೇಧದ ಪ್ರಸ್ತಾಪ ಮೂಲೆಗುಂಪಾಗಿದ್ದ ಸಂದರ್ಭದಲ್ಲಿ ಗೋಪ್ರೇಮಿಗಳು ಗೋಹತ್ಯೆ ನಿಷೇಧ ಮಾಡಬೇಕೆಂದು ಸಂಸತ್ ಭವನದ ಎದುರು ಚಳವಳಿ ಹೂಡಿದರು. ಆ ಸಂದರ್ಭದಲ್ಲಿ ಕರ್ಫ್ಯೂ ಜಾರಿಯಾಯಿತು. ಅದನ್ನೂ ಮೀರಿದ ಚಳವಳಿಗಾರರು ಸಂಸತ್ ಭವನದ ಮೇಲೆ, ಕೇಂದ್ರ ಸರಕಾರಿ ಕಛೇರಿಗಳ ಮೇಲೆ ಧಾಳಿ ಮಾಡತೊಡಗಿದರು. ಆಗ ಪ್ರಧಾನ ಮಂತ್ರಿಯವರ ಸೂಚನೆ ಮೇರೆಗೆ ಚಳವಳಿ ನಡೆಸುತ್ತಿದ್ದ ಗೋಪ್ರೇಮಿಗಳ ಮೇಲೆ ಗುಂಡಿನ ಸುರಿಮಳೆಗರೆಯಲಾಯಿತು. ಸುಮಾರು 5000 ಜನರು ಪ್ರಾಣ ಕಳೆದುಕೊಂಡರು ಮತ್ತು ಸುಮಾರು 10000 ಜನರು ಗಾಯಗೊಂಡರು. ಸ್ವಾತಂತ್ರೋತ್ತರ ಭಾರತದಲ್ಲಿ ಈ ಘಟನೆ ಮೊದಲ ಗೋ ಹತ್ಯಾ ನಿಷೇಧದ ಹಕ್ಕೊತ್ತಾಯವಾಗಿ ಗುರುತಿಸಲ್ಪಡುತ್ತದೆ. ಮತ್ತು ಆ ದಿನ ಕಾರ್ತಿಕ ಶುಕ್ಲ ಅಷ್ಟಮಿ ಅಥವಾ ಗೋಪಾಷ್ಟಮಿಯಾಗಿತ್ತು.

ಗೋಪಾಷ್ಟಮಿ ಮತ್ತು ಗೋರಕ್ಷಣೆ

ಬಹಳ ಹಿಂದೆ ತಿರುಗಿ ನೋಡಿದಾಗ, ಗೋಪಾಷ್ಟಮಿ ಎಂಬುದು ಜಗತ್ತಿನ ಮೊದಲ ಗೋರಕ್ಷಕ ಗೋಪಾಲಕೃಷ್ಣನಿಗೆ #ಗೋವಿಂದ_ಪದವಿ ಪ್ರಾಪ್ತವಾದ ದಿನ. ದೀಪಾವಳಿಯ ಮೊದಲ ದಿನ ಇಂದ್ರನ ಪೂಜೆಯನ್ನು ಬಿಟ್ಟು ಗೋವರ್ಧನ ಗಿರಿಯನ್ನೂ ಗೋವುಗಳನ್ನೂ ಪೂಜಿಸಿದ ಕಾರಣಕ್ಕೆ ದೇವೇಂದ್ರನ ವಿನಂತಿಯಂತೆ ವರುಣ ಸುರಿಸಿದ ಮಳೆಯಿಂದ ಗೋವುಗಳನ್ನೂ ಗೋಪಾಲಕರನ್ನೂ ರಕ್ಷಿಸಲು ಏಳು ದಿನಗಳ ಕಾಲ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ಶ್ರೀಕೃಷ್ಣನಿಗೆ ಗೋಲೋಕದ ಇಂದ್ರನಾಗುವ ಯೋಗ ಪ್ರಾಪ್ತವಾಯಿತು. ದೇವಲೋಕಕ್ಕಿಂತ ಮಿಗಿಲಾದುದು ಗೋಲೋಕ, ದೇವೇಂದ್ರ ಪದವಿಗಿಂತ ಮಿಗಿಲಾದುದು ಗೋವಿಂದ ಪದವಿ!

ಗೋಪಾಷ್ಟಮಿ ಮತ್ತು ಗೋರಕ್ಷಣೆಯ ಹಕ್ಕೊತ್ತಾಯ

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಪೀಠಾರೋಹಣದ ದಿನದಿಂದ ಗೋವಿನ ಉಳಿವಿಗಾಗಿ, ಭಾರತೀಯ ಗೋತಳಿಗಳ ಮಹತ್ವವನ್ನು ಸಾರುವುದಕ್ಕಾಗಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿರುವುದು ಮತ್ತು ಶ್ರೀರಾಮಚಂದ್ರಾಪುರ ಮಠವು ತನ್ನ ಗೋ ರಕ್ಷಣೆಯ ಕಾರ್ಯಗಳ ಮೂಲಕ ವಿಶ್ವ ವಿಖ್ಯಾತವಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ವಿಶ್ವ ಗೋಸಮ್ಮೇಳನವು ಗೋವಿನ ಮಹತಿಯನ್ನು ವಿಶ್ವದಾದ್ಯಂತ ಸಾರಿದರೆ, ವಿಶ್ವಮಂಗಲ ಗೋಗ್ರಾಮ ಯಾತ್ರೆಯು ದೇಶದ ಬಹುಭಾಗವನ್ನು ಸಂಚರಿಸಿ ಎಂಟು ಕೋಟಿಗೂ ಹೆಚ್ಚು ಜನರ ಗೋಹತ್ಯಾ ನಿಷೇಧದ ಹಕ್ಕೊತ್ತಾಯದ ಸಹಿಯನ್ನು ಸಂತರೊಡಗೂಡಿ ಅಂದಿನ ರಾಷ್ಟ್ರಪತಿಯವರಿಗೆ ಸಮರ್ಪಿಸಿತು.

ಪರಮಪೂಜ್ಯರ ಚಾತುರ್ಮಾಸ್ಯಗಳು ಗೋವಿಗೆ ಸಮರ್ಪಿತವಾದುವು. ಒಂದೊಂದು ಚಾತುರ್ಮಾಸ್ಯವೂ ಗೋವಿನ ಜೀವನ ಗೋಸ್ವಾತಂತ್ರ್ಯದ ಚಿಂತನೆ ಹಾಗೂ ಅದರ ಕಾರ್ಯ ರೂಪಕ್ಕಾಗಿ ವಿನಿಯೋಗವಾದವು.

ಗೋಚಾತುರ್ಮಾಸ್ಯದ ನಂತರ ಗೋಪಾಷ್ಟಮಿಯಂದು, ಅಂದರೆ 1966 ರ ಗೋ ಹತ್ಯಾ ನಿಷೇಧದ ಹಕ್ಕೊತ್ತಾಯದ ಸ್ವರ್ಣ ಮಹೋತ್ಸವವೋ ಎನ್ನುವಂತೆ 2016 ರ ಗೋಪಾಷ್ಟಮಿಯಂದು ಆರಂಭಗೊಂಡಿತು #ಮಂಗಲಗೋಯಾತ್ರೆ. ಸಪ್ತರಾಜ್ಯಗಳನ್ನು ಸಂಚರಿಸಿದ ಈ ಗೋಯಾತ್ರೆಗೆ ಗೋಪ್ರೇಮದ ದ್ಯೋತಕವಾದ ಮಂಗಲಪಾಂಡೆಯ ಗೌರವಾರ್ಥ ಮಂಗಲಗೋಯಾತ್ರೆ ಎಂಬ ಹೆಸರಾದರೆ, ಗೋಯಾತ್ರೆಯ ರಥಕ್ಕೆ ಶ್ರೀಮಠದ ಗೋಸಂರಕ್ಷಣೆಯ ಪ್ರೇರಣಾದಾಯಿ ಮಹಾನಂದಿಯ ಮೂರ್ತಿಯೇ ಸ್ಪೂರ್ತಿಯಾಯಿತು. ದಶ(ಹತ್ತು) ರಥಗಳು ಏಳು ರಾಜ್ಯಗಳನ್ನು ಸ್ಪರ್ಶಿಸಿ, ಕರ್ನಾಟಕದ ಮೂಲೆ ಮೂಲೆಗಳಲ್ಲಿ ಗೋಮಹತಿಯನ್ನು ಸಾರಿದವು. ಗೋಪ್ರೇಮಿ ಸಂತರು ಗೋ ಆಧಾರಿತ ರೈತರು ಗೋಯಾತ್ರೆಯ ಭಾಗವಾದರು. ಅದರ ಫಲವಾಗಿ #ಭಾರತೀಯ_ಗೋಪರಿವಾರ ರಚನೆಯಾಯಿತು. ಗೋವಿಗಾಗಿ ಮಿಡಿಯುವ, ಮಡಿಯಲು ಸಿದ್ಧವಿರುವ ಗೋಪ್ರೇಮಿಗಳನ್ನು ಏಕಸೂತ್ರದಲ್ಲಿ ಮಂಗಲಗೋಯಾತ್ರೆ ಪೋಣಿಸಿತು.

ಮುಂದಿನ ಚಾತುರ್ಮಾಸ್ಯವು ಅಭಯ ಚಾತುರ್ಮಾಸ್ಯವೆಂಬ ಹೆಸರಿನೊಡನೆ ಗೋವಿಗೆ ಅಭಯವೀಯುವ ಅಭಯಾಕ್ಷರ ಆಂದೋಲನದ ಚಾತುರ್ಮಾಸ್ಯವಾಯಿತು. ತಮಿಳುನಾಡಿನ ಆಡಿ ಜಾತ್ರೆಯ ಮೂಲಕ ಕಟುಕರ ಕೈಸೇರುತ್ತಿದ್ದ ಸಾವಿರಕ್ಕೂ ಹೆಚ್ಚು ಗೋವುಗಳನ್ನು ಅಭಯಜಾತ್ರೆಯ ಮೂಲಕ ರಕ್ಷಿಸಲಾಯಿತು.

ಅಭಯಾಕ್ಷರ ಆಂದೋಲನದ ಮೂಲಕ ಲಕ್ಷಾಂತರ ಜನರು ಗೋಹತ್ಯಾ ನಿಷೇಧದ ಹಕ್ಕೊತ್ತಾಯ ಪತ್ರಗಳನ್ನು ಸಹಿ‌ ಮಾಡುವ ಮೂಲಕ ಜನಜಾಗೃತಿ ಜನಾಭಿಮತ ಸ್ಪಷ್ಟವಾಗಿ ಗೋಚರಿಸಿತು.

ಅಭಯಾಕ್ಷರ ಪತ್ರಗಳ ಸಂಗ್ರಹಕ್ಕಾಗಿ ಮತ್ತೊಂದು ಗೋಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಗೋಹತ್ಯಾ ನಿಷೇಧದ ಹಕ್ಕೊತ್ತಾಯದ ಬೃಹತ್ ಧ್ವನಿಯಾಗಿ ಆಳುವವರ ಕಿವಿಗಪ್ಪಳಿಸಿತು. ಅಭಯಮಂಗಲವು ಅಕ್ಷರಶಃ ನಾಡಿನ ಜನತೆಯ ಧ್ವನಿಯಾಗಿ ರಕ್ತಾಕ್ಷರಗಳ ಹಕ್ಕೊತ್ತಾಯ ಪತ್ರಗಳ ರೂಪದಲ್ಲಿ ಪ್ರತಿಧ್ವನಿಸಿತು. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನೊಳಗೊಂಡು ನಾಡಿನ ಅನೇಕ ಪೂಜ್ಯ ಸಂತರೂ, ಆಬಾಲವೃದ್ಧರಾದಿಯಾಗಿ ಗೋಪ್ರೇಮಿ ಜನತೆ ರಕ್ತಾಕ್ಷರಗಳಲ್ಲಿ ಗೋಹತ್ಯಾ ನಿಷೇಧವನ್ನು ಆಗ್ರಹಿಸಿ ಹಕ್ಕೊತ್ತಾಯ ಪತ್ರಗಳನ್ನು ಬರೆದರು.

ಗೋಪಾಷ್ಟಮಿಯಂದು ಆರಂಭಗೊಂಡ ಗೋಹತ್ಯಾ ನಿಷೇಧದ ಹೋರಾಟ ದೇಶಾದ್ಯಂತ ಸಂಪೂರ್ಣ ಗೋಹತ್ಯಾ ನಿಷೇಧವಾಗುವ ವರೆಗೆ ನಿಲ್ಲದು. ಜಗತ್ತಿನ ಮೊದಲ ಗೋರಕ್ಷಕ ಗೋವಿಂದನ ಅನುಗ್ರಹ ಈ ಹೋರಾಟಕ್ಕೆ ಇನ್ನಷ್ಟು ಚೈತನ್ಯ ತುಂಬುವುದರಲ್ಲಿ ಅನುಮಾನವಿಲ್ಲ.

#ಗೋರಕ್ತಮುಕ್ತಭಾರತ ನಮ್ಮ ಕನಸು.
ನನಸಾಗಿಸೋಣ, ಬನ್ನಿ! ಗೋಹತ್ಯಾ ನಿಷೇಧದ ಹಕ್ಕೊತ್ತಾಯದ ಧ್ವನಿಗಳು ಮುಗಿಲು ಮುಟ್ಟಲಿ.
ವಂದೇ ಗೋಮಾತರಂ.

ಭಾರತೀಯ ಗೋಪರಿವಾರ