ನಮಗೆ ಅತ್ಯುಪಯುಕ್ತವಾದ ಗವ್ಯ ಉತ್ಪನ್ನಗಳಲ್ಲಿ ಒಂದು, ಗೋಮೇಧ ಅಥವಾ ಸೆಗಣಿ. ಇದು ನಮ್ಮ ನಿತ್ಯಜೀವನದಲ್ಲಿ ಅದೆಷ್ಟು ಉಪಯೋಗಕ್ಕೆ ಬರುತ್ತದೆ ಎಂಬುದರತ್ತ ಬೆಳಕು ಬೀರುವ ಒಂದು ಪುಟ್ಟ ಪ್ರಯತ್ನ.
ಆಧುನೀಕರಣದ ಭರದಲ್ಲಿ ನಮ್ಮಲ್ಲಿನ ಬಹಳಷ್ಟು ಅಮೂಲ್ಯ ವಸ್ತುಗಳು ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತಿವೆ. ಜನರಿಗೆ ಅವುಗಳ ಮಹತ್ವದ ಅರಿವೂ ಕೂಡ ಇಲ್ಲದಾಗುತ್ತಿದೆ. ಅಂಥ ಅಮೂಲ್ಯ ವಸ್ತುಗಳಲ್ಲಿ ಒಂದು ಗೋಮೇಧ. ಕಾರಣ, ನಾವು ಇಷ್ಟೆಲ್ಲ ಪ್ರಗತಿ ಹೊಂದುವುದಕ್ಕೆ ಮೂಲವೇ ಗೋಮೇಧ ಎಂಬುದರ ಅರಿವು ಇಲ್ಲದಿರುವುದು. ಗಮನಿಸಿ, ನಮ್ಮ ಸಾಮಾಜಿಕ ಸಮಸ್ಯೆಗಳಾದ ಆಹಾರ, ನೀರು, ಇಂಧನ, ವಸತಿ, ಆರೋಗ್ಯ, ಪೋಷಕಾಂಶ – ಇವುಗಳ ಕೊರತೆ, ಬಡತನ ಹಾಗೂ ನಿರುದ್ಯೋಗ ಇವುಗಳಿಗೆ ಪರಿಹಾರವಾಗಬಲ್ಲುದು ಗೋಮೇಧ. ಇದರ ಅರಿವು ಪುರಾತನ ಭಾರತದಲ್ಲಿತ್ತು. ಹಾಗಾಗಿಯೇ ಅಂದು ಅಷ್ಟು ಸಂಪದ್ಭರಿತವಾಗಿತ್ತು ನಮ್ಮ ದೇಶ.
ಗೋಮೇಧವೇ ನಮ್ಮ ಆರ್ಥಿಕ ಸ್ಥಿತಿಯ ಕೇಂದ್ರವಾದಾಗ :
- ಗೊಬ್ಬರಗಳು ಬಹಳ ಅಗ್ಗದ ಬೆಲೆಗೆ ದೊರೆಯಬಹುದು.
- ಆಹಾರದ ಬೆಳೆಯುವಿಕೆ ಹಾಗೂ ದೊರೆಯುವಿಕೆ ಅಗ್ಗವಾಗಬಹುದು.
- ಮಣ್ಣಿನ ಫಲವತ್ತತೆ ಎಂದೂ ಕಡಿಮೆಯಾಗಬಹುದು.
- ಇಂಧನವೂ ಅಗ್ಗವಾಗಬಹುದು.
- ಹಳ್ಳಿಗಳಲ್ಲಿ ವಸತಿ ಅಗ್ಗವಾಗಬಹುದು.
- ನಮ್ಮ ಪುರಾತನ ವೈದ್ಯಪದ್ಧತಿಯಾದ ಆಯುರ್ವೇದ ಮರೆಯಾಗದೆ, ಉಳಿದು ಬೆಳೆದೀತು.
ಗೋವಿಗೆ ವಯಸ್ಸಾದಂತೆ ಹಾಲು ದೊರಕದೇ ಇದ್ದೀತು, ಕೃಷಿ ಕೆಲಸಗಳಲ್ಲಿ ಉಪಯೋಗಕ್ಕೆ ಬರದಿದ್ದೀತು, ಸಂತಾನೋತ್ಪತ್ತಿಯೂ ಇಲ್ಲದಿದ್ದೀತು, ಆದರೆ ಗೋಮೇಧ ಸದಾ ಲಭ್ಯ ತಾನೆ? ಈಗ ಏನಾಗುತ್ತಿದೆಯೆಂದರೆ, ಸರಕಾರ ತನ್ನ ಲಾಭ ನೋಡುತ್ತಿದೆ. ರೈತರು ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿದರೆ, ಅದನ್ನು ತಯಾರು ಮಾಡುವ ಕಂಪೆನಿಗಳಿಂದ ಲಾಭ ಸಿಗುತ್ತದಲ್ಲ.
ಇಂದು ಗೋಮೇಧದ ಬಳಕೆ ಇಲ್ಲದಿರುವುದರಿಂದಾಗಿ ತಲೆದೋರಿರುವ ಕೆಲವು ಸಮಸ್ಯೆಗಳೆಂದರೆ :
- ಮಣ್ಣಿನ ಫಲವತ್ತತೆ ಕ್ರಮೇಣ ನಾಶವಾಗುತ್ತಿದೆ.
- ಆಹಾರ ಧಾನ್ಯಗಳು ದುಬಾರಿಯಾಗುತ್ತಿವೆ.
- ಧಾರ್ಮಿಕ ಆಚರಣೆಗಳು ಕಳೆಗುಂದುತ್ತಿವೆ.
- ಆಯುರ್ವೇದ ಅಗತ್ಯ ಮೂಲವಿಲ್ಲದೆ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ.
- ಇಂಧನಗಳು ಮುಗಿಯುತ್ತಿವೆ ಹಾಗೂ ದುಬಾರಿಯಾಗುತ್ತಿವೆ.
- ಅತ್ಯಮೂಲ್ಯವಾದ ಬೆರಣಿಯ ಬೂದಿ ಈಗ ಸಿಗುತ್ತಿಲ್ಲ.
- ಕಾಡು ನಶಿಸುತ್ತಿದೆ.
- ವಸತಿ, ನಿರುದ್ಯೋಗ ಸಮಸ್ಯೆಗಳು ಹೆಚ್ಚುತ್ತಿವೆ.
ಒಂದೊಂದೇ ಅಂಶಗಳನ್ನು ಗಮನಿಸುತ್ತಾ ಹೋಗೋಣ.
ಆಹಾರ-ಧಾನ್ಯಗಳ ಬೆಳೆಯುವಿಕೆ :
ಗೋಮೇಧವು ಪ್ರಪಂಚದಲ್ಲೇ ಅತ್ಯಂತ ಅಗ್ಗ ಮತ್ತು ನಿರುಪದ್ರವಕಾರಿ ಗೊಬ್ಬರ. ಇದರ ಬಳಕೆಯಿಂದ ನಮ್ಮ ರೈತ ಅತೀ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಬೆಳೆ ಬೆಳೆಯಬಲ್ಲ. ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸಮಸ್ಥಿತಿಯಲ್ಲಿಡಲು ಇದೊಂದೇ ಸಾಕು. ಆದರೆ ಸರಕಾರ ಏನು ಮಾಡುತ್ತಿದೆ ಎಂದರೆ, ಗೋಹತ್ಯೆಯನ್ನು ತಡೆಯದೆ ಮುಂದುವರಿಯಲು ಬಿಟ್ಟು ಗೋಮೇಧ ಅಲಭ್ಯವಾಗುವಂತೆ ಮಾಡುತ್ತಿದೆ. ರೈತರು, ಇದನ್ನು ಬಳಸದೆ, ಕೃಷಿಯಲ್ಲಿ ಪ್ರಗತಿ ಕಾಣದಿದ್ದಾಗ, ದುಬಾರಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ. ಹಾಗಾಗಿ ಆಹಾರಪದಾರ್ಥಗಳ ಬೆಲೆಯನ್ನು ಹೆಚ್ಚಿಸಬಹುದು. ಒಟ್ಟಿನಲ್ಲಿ ಹಣದುಬ್ಬರದ ಮೆಲೆ ಈ ಮೂಲಕ ಹಿಡಿತ ಸಾಧಿಸುವ ಪ್ರಯತ್ನ.
ಇದಲ್ಲದೆ, ಈಗ ನೇಗಿಲ ಮೂಲಕ ಉಳುವ ಎತ್ತುಗಳು ಇಲ್ಲದ ಕಾರಣ, ರೈತರು ಒತ್ತಾಯ ಪೂರ್ವಕವಾಗಿ ಟ್ರ್ಯಾಕ್ಟರ್ ಬಳಸಲೇಬೇಕಾಗಿದೆ. ಇದರಿಂದಾಗಿ ಒಂದು ಕಾಲದಲ್ಲಿ ಸ್ವತಂತ್ರವಾಗಿದ್ದ ನಮ್ಮ ರೈತ, ಈಗ ಗೊಬ್ಬರ ಹಾಗೂ ಟ್ರ್ಯಾಕ್ಟರ್ಗೋಸ್ಕರ ಇತರರ ಮೇಲೆ ಅವಲಂಬಿತನಾಗಬೇಕಾಗಿದೆ. ರೈತರಲ್ಲಿ ರಾಸಾಯನಿಕ ಗೊಬ್ಬರಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಬೆಳೆಸಿ, ಅವರು ಅದನ್ನೇ ಬಳಸುವಂತೆ ಪ್ರೇರೇಪಿಸಲಾಗುತ್ತದೆ. ಅದಲ್ಲದೆ ಬೇರೆ ದಾರಿಯೇ ಇಲ್ಲ ಎಂಬಂತಾಗಿದೆ. ಯಾಕೆಂದರೆ ಪ್ರಾಕೃತಿಕ ಗೊಬ್ಬರವಾದ ಗೋಮೇಧ ಸಿಗುತ್ತಿಲ್ಲ. ರಾಸಾಯನಿಕ ಗೊಬ್ಬರಗಳು ಬೆಳೆಯನ್ನೇನೋ ಹೆಚ್ಚಿಸಿರಬಹುದು. ಆದರೆ ಬೆಳೆ ಬೆಳೆಯಲು ಬೆಕಾಗುವ ಖರ್ಚು ಹೆಚ್ಚಾಗಿದೆ ಜೊತೆಗೆ ಮಣ್ಣಿನ ಫಲವತ್ತತೆಯ ನಾಶದೊಂದಿಗೆ ಅಹಾರದ ರುಚಿ ಮತ್ತು ಅದರಲ್ಲಿನ ಪೋಷಕಾಂಶಗಳ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಒಂದುವೇಳೆ ನಮ್ಮ ಕೃಷಿಪದ್ಧತಿಯು ಕೇವಲ ಗೋವಿನ ಮೇಲೆ ಅವಲಂಬಿತವಾಗಿದ್ದಿದ್ದರೆ, ಟ್ರ್ಯಾಕ್ಟರಿಗಾಗಿ ಖರ್ಚು ಮಾಡುವ ಹಣ ಮತ್ತು ಅದರ ಬಡ್ಡಿ ಅಥವಾ ಅದರ ಬಾಡಿಗೆ ಉಳಿಯುತ್ತಿತ್ತು. ದುಬಾರಿಯಾದ ರಾಸಾಯನಿಕ ಗೊಬ್ಬರಗಳನ್ನು ಕೊಳ್ಳಲು ಬೇಕಾದ ಹಣ ಮತ್ತು ಅದರ ಬಡ್ಡಿ, ಕ್ರಿಮಿನಾಶಕಗಳ ಹಣ, ಮೋಟಾರು ಪಂಪುಗಳ ಹಣ ಮತ್ತು ಬಡ್ಡಿ, ಅದಕ್ಕಾಗಿ ಅಗತ್ಯವಿರುವ ಡೀಸೆಲ್ ಅಥವಾ ವಿದ್ಯುತ್ನ ಹಣ – ಇದೆಲ್ಲ ಉಳಿಯುತ್ತಿತ್ತು. ಒಟ್ಟಿನಲ್ಲಿ ಅನಗತ್ಯವಾದ ದೊಡ್ಡ ಖರ್ಚುಗಳೆಲ್ಲ ಉಳಿಯುತ್ತಿದ್ದವು. ಹಾಗಿಲ್ಲದ ಕಾರಣ ಇವತ್ತು ಭೂಮಿಯಿಂದ ಬೆಳೆ ತೆಗೆಯುವುದೆಂದರೆ ಬಹಳ ದುಬಾರಿಯಾಗಿಬಿಟ್ಟಿದೆ. ತತ್ ಪರಿಣಾಮ ಬೆಳೆದ ಬೆಳೆಯ ಬೆಲೆ ಏರಿಸುವಂತೆ ದೇಶಾದ್ಯಂತ ನೂರಾರು ಸ್ಟ್ರೈಕ್ಗಳು, ಪ್ರತಿಭಟನ ಮೆರವಣಿಗೆಗಳು.
ರೈತರು ಪಡೆದ ಈ ಹೆಚ್ಚುವರಿ ಹಣವು, ತೈಲ ಮತ್ತು ಡೀಸೆಲ್ ಉತ್ಪಾದಿಸುವ ದೇಶಗಳು, ರಾಸಾಯನಿಕ ಗೊಬ್ಬರ, ಕೀಟನಾಶಕ, ಟ್ರ್ಯಾಕ್ಟರ್ಗಳನ್ನು ತಯಾರಿಸುವ ಕಂಪೆನಿಗಳು ಹಾಗೂ ಸರಕಾರಿ ಸಾಲ ನೀಡುವ ಹಲವು ಸಂಸ್ಥೆಗಳು -ಇವುಗಳ ಮಧ್ಯೆ ಹಂಚಿಹೋಗುತ್ತಿದೆ. ರೈತ ಮೊದಲಿದ್ದ ಆ ಬಡಪರಿಸ್ಥಿತಿಯಲ್ಲೇ ಉಳಿದಿದ್ದಾನೆ!
ಮಣ್ಣಿನ ಫಲವತ್ತತೆ :
ಆಹಾರ ಧಾನ್ಯಗಳ ಬೆಳೆಗಳಿಂದಾಗಿ ನಷ್ಟವಾದ ಪೋಷಕಾಂಶ ಮರುಪೂರಣೆಯಾಗದಿದ್ದರೆ, ಪ್ರತಿ ಬೆಳೆಯಲ್ಲೂ ಮಣ್ಣಿನ ಫಲವತ್ತತೆ ನಶಿಸುತ್ತಾ ಬರುತ್ತದೆ. ಪರಿಣಾಮ, ಅಲ್ಲಿ ಬೆಳೆದ ಧಾನ್ಯಗಲ್ಲೂ ಪೋಷಕಾಂಶಗಳು ಕಡಿಮೆಯಾಗಲಾರಂಭಿಸಿವೆ.
ಈ ಪ್ರಾಕೃತಿಕ ಗೊಬ್ಬರದ ಬಗೆಗೆ ನಡೆದ ಒಂದು ಪ್ರಯೋಗ ಹೀಗಿದೆ: (ಡಾ. ಸತೀಶ್ಚಂದ್ರ ದಾಸ್ಗುಪ್ತ ಅವರು ಬರೆದ “Cow in India” ಎಂಬ ಪುಸ್ತಕದ ೪೩ ಹಾಗೂ ೫೬೨ನೇ ಪುಟದಲ್ಲಿ ಈ ಉಲ್ಲೇಖವನ್ನು ಕಾಣಬಹುದು.) ಒಂದೇ ರೀತಿಯ ವಿಸ್ತೀರ್ಣದ ಮೂರು ಜಮೀನುಗಳಲ್ಲಿ ಮೊದಲನೆಯದ್ದನ್ನು ಎರಡೂವರೆ ಇಂಚಿನಷ್ಟು ಪ್ರಾಕೃತಿಕ ಗೊಬ್ಬರವನ್ನು ಬಳಸಿ, ಎರಡನೆಯದ್ದನ್ನು ಅರ್ಧ ಇಂಚಿನಷ್ಟು ಹಾಗೂ ಮೂರನೆಯದ್ದನ್ನು ಸ್ವಲ್ಪವೂ ಪ್ರಾಕೃತಿಕ ಗೊಬ್ಬರ ಬಳಸದೆ ಅಕ್ಕಿ ಬೆಳೆಯಲಾಯಿತು. ಫಲಿತಾಂಶದಿಂದ ಕಂಡುಬಂದ ಅಂಶವೇನೆಂದರೆ, ಮೊದಲನೇ ಜಮೇನಿನಲ್ಲಿ ಬೆಳೆದ ಅಕ್ಕಿಯ ಪ್ರಮಾಣ ಮೂರನೇ ಜಮೀನಿನ ಅಕ್ಕಿಗಿಂತ ಆರು ಪಟ್ಟು ಹಾಗೂ ಹುಲ್ಲಿನ ಪ್ರಮಾಣ ಮೂರೂವರೆ ಪಟ್ಟು ಅಧಿಕವಾಗಿತ್ತು! ಇನ್ನೊಂದು ಕಡೆ ತೆಲಾನ್ ಖೇರಿ ಎಂಬ ಪ್ರದೇಶದಲ್ಲಿ ಕೂಡ ಈ ರೀತಿ, ಗೋಮೇಧ ಬಳಸಿ ಬೆಳೆ ಬೆಳೆದಾಗ ಕಂಡುಬಂದ ವಾರ್ಷಿಕ ಫಲಿತಾಂಶವೂ ಆಶ್ಚರ್ಯಕರವಾಗಿತ್ತು. ಆರು ವರ್ಷಗಳಲ್ಲಿ ಧಾನ್ಯದ ಬೆಳೆ ೧೭೮.೫% ಹಾಗೂ ಹುಲ್ಲಿನ ಬೆಳೆ ೫೪.೫% ಅಧಿಕವಾಗಿತ್ತು! ರಾಸಾಯನಿಕ ಗೊಬ್ಬರದಿಂದ ಇದು ಸಾಧ್ಯವಾದೀತೆ, ಭೂಮಿಯ ಫಲವತ್ತತೆಗೆ ಕಿಂಚಿತ್ತೂ ಧಕ್ಕೆ ತಾರದೆ? ಪ್ರತಿ ವರ್ಷ ೧,೫೦೦ ಕೋಟಿಯಷ್ಟು ಹಣ ಈ ರಾಸಾಯನಿಕಗಳ ಬಳಕೆಗಾಗಿ ಖರ್ಚಾಗುತ್ತಿದೆ. ಈ ಖರ್ಚಿಗಾಗಿ ಸರಕಾರ ನೀಡುತ್ತಿರುವ ಸಬ್ಸಿಡಿ, ೪೦೦ ಕೋಟಿ ರೂಪಾಯಿಗಳು, ಅದೂ ತೆರಿಗೆಯ ಮೂಲಕ ನಮ್ಮ ಜನರಿಂದಲೆ ಪಡೆದದ್ದು. ಇನ್ನುಳಿದ ೧,೧೦೦ ಕೋಟಿ ರೂಪಾಯಿಗಳನ್ನು ಬೆಳೆಯ ಬೆಲೆಯೇರಿಸುವ ಮೂಲಕ ಸರಿದೂಗಿಸಲು ಪ್ರಯತ್ನಿಸುತ್ತಾರೆ.
ಹಾಗಾಗಿ ಈ ರಾಸಾಯನಿಕಗಳ ಬಳಕೆಯಿಂದ ಬೆಳೆದ ಆಹಾರ ಪದಾರ್ಥಗಳನ್ನು ಕೊಳ್ಳುವ ಬಡಜನತೆ, ಒಂದು ಕಡೆ ಸರಕಾರ ಹಾಗೂ ಇನ್ನೊಂದು ಕಡೆ ಬೆ(ಲೆ)ಳೆಗಾರ ಇವರ ಮಧ್ಯೆ ಬಳಲುತ್ತಿದೆ. ಇದು ಹಣದುಬ್ಬರ ಹೆಚ್ಚಾಗಲೂ ಕಾರಣವಾಗುತ್ತಿದೆ.
ನಿರುದ್ಯೋಗ :
ಗೋಹತ್ಯೆ ಮಿತಿಮೀರಿ, ಗೋಮೇಧ ಅಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಅದೆಷ್ಟೋ ಸಾವಿರ ಹಿಂದೂ ಹಾಗೂ ಮುಸಲ್ಮಾನ ಕುಟುಂಬಗಳು ನಿರುದ್ಯೋಗಿಗಳಾಗುತ್ತಿವೆ, ಎಂಬುದು ಗೊತ್ತಾ? ಈ ಅಂಶಗಳನ್ನು ಗಮನಿಸಿ :
- ಗೋವಿನ ಬೆರಣಿ ಹಾಗೂ ಗೋಮಾಂಸ – ಈ ಎರಡೂ ಆರ್ಥಿಕ ಮೂಲಗಳೇ ಅಗಿವೆ. ಒಂದು ಗೋವಿನ ಹತ್ಯೆಯಾದರೆ, ಅದರ ಮಾಂಸವು ಆ ಕಸಾಯಿಗಳಿಗೆ ಕೇವಲ ಒಂದು ದಿನಕ್ಕಷ್ಟೇ ಲಭ್ಯ. ಮರುದಿನದ ವ್ಯಾಪಾರಕ್ಕೆ ಇನ್ನೊಂದು ಗೋವಿನ ಹತ್ಯೆಯಾಗಬೇಕು. ಆದರೆ, ಅದೇ ಗೋವನ್ನು ಕೊಲ್ಲದೇ ಇದ್ದರೆ, ಸುಮಾರು ೫-೬ ಸಾವಿರ ಬೆರಣಿಗಳನ್ನು ಪ್ರತಿ ವರ್ಷ ಅದರ ಸೆಗಣಿಯಿಂದ ತಯಾರಿಸಬಹುದು ಹಾಗೂ ಇದನ್ನು ಮಾರುವ ಮೂಲಕ ಬರುವ ಹಣ, ಒಬ್ಬ ವ್ಯಕ್ತಿಗೆ ಒಂದು ವರ್ಷದ ಜೀವನಕ್ಕೆ ಸಾಕು! ಬೇರೆ ಯಾವುದೇ ರೀತಿಯ ಉಪಯೋಗ ಇಲ್ಲದಿರುವಾಗಲೂ, ಒಂದು ಗೋವು ಕನಿಷ್ಠ ೫ ವರ್ಷ ಜೀವಿಸಿದರೆ, ಒಬ್ಬ ಮನುಷ್ಯನಿಗೆ ೫ ವರ್ಷಗಳ ಕಾಲ ಉದ್ಯೋಗ ನೀಡಬಲ್ಲುದು. ಆ ಗೋವನ್ನು ಕೊಂದರೆ, ಕೇವಲ ಒಂದು ಅಥವಾ ಎರಡೇ ದಿನದ ಉದ್ಯೋಗ!
- ಗುಜರಾತಿನ ಕಸಾಯಿಗಳು ಹೆಳುವಂತೆ, ಅವರು ದಿನಕ್ಕೆ ೭೦ ಗೋವುಗಳನ್ನು ಹತ್ಯೆಮಾಡುತ್ತಾರೆ. ಅಂದರೆ ಸುಮಾರು ೨೫,೦೦೦ ಗೋವುಗಳು, ಪ್ರತಿ ವರ್ಷ! ಹಾಗಾಗಿ ಬೆರಣಿ ಮಾರುವ ಮೂಲಕ ಜೀವನ ನಡೆಸುವ ೨೫,೦೦೦ ಮಹಿಳೆಯರು, ಹಿಂದೂವೇ ಇರಬಹುದು ಮುಸ್ಲಿಮ ಆಗಿರಬಹುದು, ನಿರುದ್ಯೋಗಿಗಳಾಗಿಬಿಡುತ್ತಾರೆ.
- ಗೋಹತ್ಯೆ ಹಾಗೂ ಅದರ ಚರ್ಮದ ರಫ್ತಿನಿಂದಾಗಿ ಇಡೀ ಹರಿಜನ ಸಮುದಾಯ ನಿರುದ್ಯೋಗದಿಂದ ನರಳುತ್ತಿದೆ. ಯಾಕೆಂದರೆ, ಅವರಿಗೆ ಪ್ರಾಕೃತಿಕವಾಗಿ ಸತ್ತ ಗೋವಿನಿಂದ ಸಿಗುತ್ತಿದ್ದ ಚರ್ಮ ಈಗ ಸಿಗುತ್ತಿಲ್ಲ. ಕಸಾಯಿಖಾನೆಗಳಲ್ಲಿ ಗೋವನ್ನು ಒತ್ತಾಯಪೂರ್ವಕವಗಿ ಕೊಂದು, ಅದರ ಚರ್ಮವನ್ನು ಸಂಸ್ಕರಿಸಿ ಮಾರಲಾಗುತ್ತಿದೆ. ಚರ್ಮದ ಉತ್ಪನ್ನಗಳನ್ನು ತಯಾರಿಸುವ ದೈತ್ಯ ಕಂಪೆನಿಗಳು ಇವುಗಳನ್ನೇ ಕೊಳ್ಳುತ್ತಿವೆ, ಗುಣಮಟ್ಟ ಒಳ್ಳೆಯದಿರುತ್ತದೆಂಬ ಕಾರಣಕ್ಕೆ.
- ದನದ ಸೆಗಣಿ, ಮಣ್ಣು ಹಾಗೂ ಕುದುರೆಯ ಸೆಗಣಿಯ ಮಿಶ್ರಣವನ್ನು ಬಳಸಿ ಕಟ್ಟಿದ ಮನೆಗೆ ಮಣ್ಣಿನ ಇಟ್ಟಿಗೆಯ ಅಂದವಾದ ಮೇಲ್ಚಾವಣಿಯೊಂದನ್ನು ಮಾಡಿಬಿಟ್ಟರೆ ಆ ಮನೆ ಸುಭದ್ರ. ಹಳ್ಳಿಯಲ್ಲಿನ ಕುಂಬಾರರು ಮಾತ್ರ ಅಂಥ ಮನೆ ಕಟ್ಟಿಯಾರು. ಪ್ರಸ್ತುತ ಇರುವ, ಮಣ್ಣು ಮತ್ತು ಸೆಗಣಿಯಿಂದ ಮಾಡದ ಮನೆಗಳಿಗೆ, ಈ ಇಟ್ಟಿಗೆಗಳ ಮೇಲ್ಚಾವಣಿ ಮಾಡಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಮನೆಕಟ್ಟಲು ಗೋಮೇಧವೆ ಮೂಲವಾಗಿತ್ತು. ಒಂದುವೇಳೆ ಹಳ್ಳಿಗಳಲ್ಲಿ ಕೇವಲ ಈ ಕುಂಬಾರರೇ ಮನೆ ಕಟ್ಟುವವರಾಗಿದ್ದಿದ್ದರೆ, ಮೂರು ಕೋಟಿ ಮನೆಗಳನ್ನು ಕಟ್ಟಲು ಸುಮಾರು ೫೫ ಲಕ್ಷ ಕುಂಬಾರ ಕುಟುಂಬಗಳು ಬೇಕಾದೀತು. ಅಷ್ಟೇ ಪ್ರಮಾಣದ, ಮಣ್ಣಿನ ಇಟ್ಟಿಗೆ ಮಾಡುವ ಕುಟುಂಬಗಳೂ ಬೇಕಾದೀತು. ಹಾಗಾಗಿ ಗೋಮೇಧವು ಸುಮಾರು ಮೂರು ಕೋಟಿ ಕುಂಬಾರ ಕುಟುಂಬಗಳಿಗೆ ಉದ್ಯೋಗ ದೊರೆಯುವುದಕ್ಕೆ ಮೂಲ. ಈಗ ಅದು ಸಿಗುತ್ತಿಲ್ಲವಾದ್ದರಿಂದ ಕುಂಬಾರ ಕುಟುಂಬಗಳು ಉದ್ಯೋಗವಿಲ್ಲದೆ ಪಟ್ಟಣಗಳಿಗೆ ವಲಸೆಹೋಗಿ ಅಲ್ಲಿ ಬೀದಿಯಲ್ಲಿ ಮಲಗುವ ಪರಿಸ್ಥಿತಿಗೆ ಬಂದಿವೆ.
ನಮ್ಮ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಡುತ್ತಿದೆ ಎಂಬುದಕ್ಕೆ ಇವು ಕೆಲವೇ ಕೆಲವು ಉದಾಹರಣೆಗಳು. ನಮ್ಮಲ್ಲಿನ ನಿರುದ್ಯೋಗಕ್ಕೆ ಸರಕಾರವೆ ನೇರ ಹೊಣೆಯೆಂದರೆ ತಪ್ಪಾಗಲಾರದು. ಪಾಶ್ಚಿಮಾತ್ಯ ಕಂಪೆನಿಗಳಿಂದ ಬರುವ ಲಾಭದ ಆಸೆಗೆ, ಸ್ಥಳೀಯ ಆರ್ಥಿಕ ಮೂಲದ ನಾಶಮಾಡಲಾಗುತ್ತಿದೆ. ಈ ಕಂಪೆನಿಗಳು ಕೆಲವಾರು ಸಾವಿರ ಜನರಿಗೆ ಉದ್ಯೋಗ ಒದಗಿಸಿರಬಹುದು, ಆದರೆ ಲಕ್ಷಾಂತರ ಜನ ನಿರುದ್ಯೋಗಿಗಳಾಗಿಯೇ ಇದ್ದಾರೆ.
ಧಾರ್ಮಿಕ ಆಚರಣೆಗಳು :
ಹಿಂದೂ ಸಂಸ್ಕೃತಿಯಲ್ಲಿ ಮನುಷ್ಯ ಜೀವನಕ್ಕೆ ಹದಿನಾರು ಸಂಸ್ಕಾರಗಳಿವೆ. ಪ್ರತಿಯೊಂದು ಸಂಸ್ಕಾರಕ್ಕೂ ಗೋಮೇಧ ಬೇಕೇಬೇಕು. ಯಾವುದೇ ಧಾರ್ಮಿಕ ಆಚರಣೆಗಳನ್ನು ಮಾಡುವಾಗ ಮನಸ್ಸು, ಮಾನಸಿಕ ಸ್ಥಿತಿ, ಸುತ್ತಲಿನ ಪರಿಸರ ಹಾಗೂ ಆಚರಣೆಗೆ ಬಳಸುವ ವಸ್ತುಗಳನ್ನು ಪರಿಶುದ್ಧೀಕರಿಸಬೇಕಾದ್ದು ಅತ್ಯಗತ್ಯ. ಧಾರ್ಮಿಕ ಕಾರ್ಯಗಳನ್ನು ನಡೆಸುವ ಸ್ಥಳವನ್ನು ಶುದ್ಧೀಕರಿಸಿ ಗೋಮೇಧವನ್ನು ಬಳಿಯಬೇಕು. ಬೆರಣಿ, ಶ್ರೀಗಂಧ ಇತ್ಯಾದಿಗಳಿಂದ ಬೆಂಕಿಯನ್ನು ಉರಿಸಬೇಕು, ಸುತ್ತಲಿನ ವಾತಾವರಣವನ್ನು ಸುಗಂಧಮಯವಾಗಿಸಿ ಶುದ್ಧೀಕರಿಸಲು. ಸೀಮೆಎಣ್ಣೆ, ವಿದ್ಯುತ್ ಅಥವಾ ಗ್ಯಾಸ್ ಒಲೆಗಳಿಂದ ಇದು ಸಾಧ್ಯವಿಲ್ಲ. ಮನಃ ಶುದ್ಧೀಕರಣ ಹಾಗೂ ಆತ್ಮ ಶುದ್ಧೀಕರಣಾಕ್ಕಾಗಿ ಧಾರ್ಮಿಕ ಸುಕಾರ್ಯಗಳನ್ನು ಮಾಡುವಾಗ, ಪಂಚಗವ್ಯ ಅಂದರೆ ಗೋವಿನ ಹಾಲು, ತುಪ್ಪ, ಮೊಸರು, ಗೋಮೇಧ ಹಾಗೂ ಗೋಮೂತ್ರದ ಮಿಶ್ರಣವನ್ನು ಸೇವಿಸಬೇಕು.
ಗೋಹತ್ಯೆ ನಿಷೇಧಿತವಾಗಿದ್ದ ಭಾರತದ ರಾಜ್ಯಗಳಲ್ಲಿ, ಸುಮಾರು ೧೯೧೫ರ ವರೆಗೆ ಮನುಷ್ಯನ ದೇಹದ ಅಂತ್ಯಸಂಸ್ಕಾರಕ್ಕೆ ಬೆರಣಿಯನ್ನೇ ಬಳಸಲಾಗುತ್ತಿತ್ತು. ಮುಂದೆ ಇದು ಅಲಭ್ಯವಾಗುತ್ತಿದ್ದಂತೆ, ಕಟ್ಟಿಗೆಯಲ್ಲಿ ಸುಡಲಾರಂಭಿಸಿದರು. ಗಮನಿಸಬೆಕಾದ ಅಂಶವೇನೆಂದರೆ, ಒಂದು ಮೃತದೇಹವನ್ನು ಸರಿಯಾಗಿ ಸುಡಲು ಸರಿಸುಮಾರು ನಾಲ್ಕು ಕ್ವಿಂಟಾಲ್ ಕಟ್ಟಿಗೆ ಬೇಕು. ಈಗೀಗ ಕಾಡಿನ ನಾಶದಿಂದಾಗಿ ಕಟ್ಟಿಗೆಯೂ ಅಲಭ್ಯವಾಗುತ್ತಿದೆ, ದೊರೆತರೂ ಅದಕ್ಕೆ ಬಹಳ ಬೆಲೆತೆರಬೇಕಾಗುತ್ತದೆ.
ಹಾಗಾಗಿ ಕೆಲವು ಕಡೆಗಳಲ್ಲಿ, ಒಣಹುಲ್ಲನ್ನು ಬಳಸಲು ಶುರುಮಾಡಿದ್ದಾರೆ. ನೋಡಿ, ಮನುಷ್ಯ ಜೀವನದ ಕೊನೆಯ ಸಂಸ್ಕಾರವಾದ ಅಗ್ನಿಸಂಸ್ಕಾರವೂ ಆಗಬೇಕಾದ ರೀತಿಯಲ್ಲಿ ಆಗುತಿಲ್ಲ. ಒಂದು ಗೋವಿನ ಹತ್ಯೆ ವರ್ಷಕ್ಕೆ ೧೦ ಜನರ ಅಗ್ನಿಸಂಸ್ಕಾರದ ಮೆಲೆ ಪರಿಣಾಮ ಬೀರುತ್ತದೆ. ವಯಸ್ಸಾದ ಗೋವನ್ನು ಕೊಲ್ಲದೆ, ಅದು ಹತ್ತು ವರ್ಷ ಬದುಕಿದ್ದರೆ, ೧೦೦ ಜನರ ಅಂತ್ಯಸಂಸ್ಕಾರಕ್ಕಾಗುವಷ್ಟು ಬೆರಣಿಯನ್ನು ಅದು ನೀಡಬಲ್ಲುದು. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಬೆರಣಿಯನ್ನು ಹೊರತು ಪಡಿಸಿ, ಕೇವಲ ಕಟ್ಟಿಗೆಯನ್ನು ಅಗ್ನಿಸಂಸ್ಕಾರಕ್ಕೆ ಬಳಸಿದರೆ, ಪ್ರತಿಮರಕ್ಕೆ ೧೫ ಲಕ್ಷ ರೂಪಾಯಿ ಖರ್ಚಾಗುತ್ತದೆ.
ಆಯುರ್ವೇದ :
ಬೆರಣಿಯ ಅಲಭ್ಯತೆಯಿಂದಾಗಿ ಕಾಡುಗಳು ನಾಶವಾಗುತ್ತಿವೆ. ಇದರಿಂದ ಅಲ್ಲಿ ದೊರೆಯುವ ಅನೇಕ ಮೂಲಿಕೆಗಳೂ ನಾಶವಾಗುತ್ತಿವೆ. ಆಯುರ್ವೇದದಲ್ಲಿ ಗಿಡಮೂಲಿಕೆಗಳಷ್ಟೇ ಪ್ರಮುಖವಾಗಿ ಉಪಯೋಗಿಸಲ್ಪಡುವುದು ಭಸ್ಮ. ಬೆರಣಿಯಿಂದ ಮಾಡಿದ ಬೆಂಕಿಯಿಂದಲೆ ಈ ಭಸ್ಮ ತಯಾರಾಗಬೇಕು. ಕಲ್ಲಿದ್ದಲು ಅಥವಾ ವಿದ್ಯುತ್ ಬಳಸಿ, ಭಸ್ಮ ತಯಾರಿಸಿದರೆ ಅದು ವಾಹನವನ್ನು ಪೆಟ್ರೋಲ್ ಬಿಟ್ಟು ಸೀಮೆಎಣ್ಣೆಯಿಂದ ಓಡಿಸಿದಂತಾಗುತ್ತದೆ. ಇನ್ನು, ಹಲವಾರು ಔಷಧಿಗಳು ಶುದ್ಧೀಕರಿಸಲ್ಪಡಬೇಕು, ಅದೂ ಗೋಮೇಧದಿಂದ. ಆದರೆ ಇತ್ತೀಚೆಗೆ ಈ ಪದ್ಧತಿ ಪ್ರಕಾರ ಆಯುರ್ವೇದ ಔಷಧಿಗಳು ತಯಾರಾಗದ ಕಾರಣ, ಅವುಗಳು ಏನೂ ಪರಿಣಾಮ ಬೀರುತ್ತಿಲ್ಲ. ಹಾಗಾಗಿ ಜನರಿಗೆ ಆಯುರ್ವೇದದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ನಮ್ಮ ಪುರಾತನ ವೈದ್ಯಪದ್ಧತಿ ಮಹತ್ವವನ್ನು ಕಳೆದುಕೊಳ್ಳುತ್ತಿದೆ.
ಬೂದಿ :
ಬೆರಣಿಯ ಬೂದಿಯ ಬೆಲೆ ಎಷ್ಟಿದ್ದೀತು? ಈ ಬೂದಿಗೆ ನಮ್ಮನ್ನು ವಿಶ್ವಬ್ಯಾಂಕ್ನ ಹಂಗಿನಿಂದ ಹೊರತರುವಷ್ಟು ಶಕ್ತಿಯಿದೆ! ಅಡಿಗೆ ಮಾಡಲು ಬಳಸಿದ ಬೆರಣಿಯ ಬೂದಿಗೆ ಬೆಲೆಯೇ ಎಂದು ಅನಿಸಬಹುದು. ಆದರೆ ಅದು ಅಷ್ಟು ಅಮೂಲ್ಯವಾದದ್ದು. ಆಹಾರಧಾನ್ಯಗಳ ಸಂಸ್ಕರಣೆಯಲ್ಲಿ ಅತ್ಯುಪಯುಕ್ತವಾದದ್ದು! ರಾಜರ ಕಾಲದಲ್ಲಿ ಧಾನ್ಯಗಳನ್ನು, ಅಷ್ಟೇ ಪ್ರಮಾಣದ ಬೆರಣಿಬೂದಿ ಸೇರಿಸಿ ಸಂಸ್ಕರಿಸಿ ಇಡಲಾಗುತ್ತಿತ್ತು. ಇದು ಸುಮಾರು ೧೨ ವರ್ಷಗಳವರೆಗೆ ಏನೂ ಆಗದೆ ಉಳಿಯುತ್ತಿತ್ತು. ನಾವೂ ಕೂಡ ಇದನ್ನು ಮಾಡಬಹುದು. ಧಾನ್ಯವನ್ನು ಈ ಬೂದಿಯೊಂದಿಗೆ ಮಿಶ್ರಣಮಾಡಿ, ಮಣ್ಣಿನಿಂದ ಮಾಡಿದ ಟ್ಯಾಂಕ್ಗಳಲ್ಲಿ ಶೇಖರಿಸಿಡಬೇಕು. ಇದು ೨-೩ ವರ್ಷಗಳವರೆಗೆ ಕೆಡದೆ ಹಾಗೇ ಉಳಿಯುತ್ತದೆ! ಆದರೆ ಜನರಿಗೆ ಇವತ್ತು ಈ ಉಪಯೋಗವೆ ಮರೆತುಹೋಗಿದೆ. ವಿಶ್ವಬ್ಯಾಂಕ್ನಿಂದ ಮಿಲಿಯಗಟ್ಟಲೆ ಹಣವನ್ನು ಪಡೆದು, ಹವಾನಿಯಂತ್ರಿತ ಆಹಾರಸಂಸ್ಕರಣಾ ಕೊಠಡಿಗಳನ್ನು ಕಟ್ಟಿಸಲಾಗುತ್ತಿದೆ. ವಿಷಕಾರಿ ಕೀಟನಾಶಕಗಳನ್ನು ಅವುಗಳ ಮೇಲೆ ಪ್ರಯೋಗಿಸಿ, ಶೇಖರಿಸಿಡಲಾಗುತ್ತದೆ. ವಿಶ್ವಬ್ಯಾಂಕ್ ಹಾಗೂ ಈ ಕೀಟನಾಶಕಗಳನ್ನು ತಯಾರಿಸುವ ಅಂತಾರಾಷ್ಟ್ರೀಯ ಕಂಪೆನಿಗಳು, ನಮ್ಮಲ್ಲಿ ಗೋಮೇಧ ಅಲಭ್ಯತೆಯ ಲಾಭ ಪಡೆಯುತ್ತಿವೆ!
ಒಂದು ವಯಸ್ಸಾದ ಗೋವು ನಮ್ಮ ಜಮೀನಿನಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲದೇ ಇರಬಹುದು. ಆದರೆ ಅದು ತನ್ನ ಕೊನೆಯುಸಿರಿರುವವರೆಗೂ ಗೋಮೇಧವನ್ನು ನೀಡುತ್ತದೆ. ಹಣದುಬ್ಬರದಿಂದ ದೂರ ಮಾಡುವ, ರೋಗ-ರುಜಿನಗಳನ್ನು ದೂರಮಾಡುವ ಹಾಗೂ ದೇಶದ ಆರ್ಥಿಕತೆಯ ಮೂಲ ಗೋಮೇಧ. ಹೊಲದಲ್ಲಿ ಕೆಲಸ ಮಾಡುವ ಆಳು, ತನಗೆ ಸಂಬಳ ಜಾಸ್ತಿ ಮಾಡಬೇಕು, ಬೋನಸ್ ನೀಡಬೇಕು ಎಂದೆಲ್ಲ ಗಲಾಟೆ ಮಾಡಬಹುದು. ಆದರೆ ಗೋವು ಇದ್ಯಾವುದನ್ನೂ ಬಯಸದೆ, ನಾವು ಅದಕ್ಕೆ ನೀಡಿದ್ದಕ್ಕಿಂತ ನೂರು ಪಟ್ಟು ಅಧಿಕ ಲಾಭವನ್ನು ನಮಗೆ ನೀಡುತ್ತದೆ.
– ವೇಣಿಶಂಕರ್ ಎಮ್. ವಸು
ಕೃಪೆ : ಗೋ ವಿಶ್ವ