ಗೋ ಸಂರಕ್ಷಣೆ, ಸಂವರ್ಧನೆ

ಸಂರಕ್ಷಣೆಯಲ್ಲಿ ಕ್ರಮಿಸಿದ ಹಾದಿ

ನಮ್ಮ ಪುರಾಣ-ಇತಿಹಾಸಗಳ ಕಾಲದಲ್ಲಿ ಗೋವಿನ ಲಾಲನೆ-ಪಾಲನೆ ನಮ್ಮ ಮಕ್ಕಳದ್ದಿರುವಂತೆಯೇ ಪ್ರೇಮಪೂರಿತವಾಗಿತ್ತು. ಯಜ್ಞಯಾಗಾದಿಗಳ ದಕ್ಷಿಣೆ, ದಾನ, ವಸ್ತು ವಿನಿಮಯ ಇಲ್ಲೆಲ್ಲ ಗೋವಿನದ್ದೇ ಪ್ರಮುಖ ಪಾತ್ರ. ಶ್ರೀಮಂತಿಕೆಯನ್ನು ಗೋ ಸಂಕುಲದ ಆಧಾರದ ಮೇಲೆ ಅಳೆಯುವ ಕ್ರಮವಿತ್ತು. ರಾಜ-ಮಹಾರಾಜರ ಕಪ್ಪ-ಕಾಣಿಕೆಗಳಲ್ಲಿ ಧನ, ಕನಕ, ಗಜ, ತುರಗಗಳಿಗೆ ಮುಕುಟದ ಸ್ಥಾನದಲ್ಲಿ ಗೋವಿರುತ್ತಿತ್ತು.

ಸ್ಥಾನ-ಮಾನಗಳನ್ನು ಅಲಂಕರಿಸಲು ಮಾನದಂಡ :

 • ನಂದರಾಜನಾಗಲು ಒಂದು ಕೋಟಿ ಗೋವುಗಳ ಪಾಲಕನಾಗಿರಬೇಕು.
 • ವೃಷಭಾನುಜನಾಗಲು ಐವತ್ತು ಲಕ್ಷ ಗೋವುಗಳ ಪಾಲಕನಾಗಿರಬೇಕು.
 • ವೃಷಭಾನುವಾಗಲು ಹತ್ತು ಲಕ್ಷ
 • ನಂದನಾಗಲು ಒಂಭತ್ತು ಲಕ್ಷ
 • ಉಪನಂದನಾಗಲು ಐದು ಲಕ್ಷ
 • ವ್ರಜನಾಗಲು ಹತ್ತು ಸಾವಿರ

ಗೋ ಸಂರಕ್ಷಣೆ, ಸಂವರ್ಧನೆಯ ಹಾದಿ :

 • ರಾಮಾಯಣದ ರಘುವಂಶದ ಪ್ರಾರಂಭ ಸುರಧೇನುವಿನಿಂದ
 • ಮಹಾಭಾರತ ಕಾಲದ ಶ್ರೀಕೃಷ್ಣನ ಹಾಗೂ ನಂದಗೋಪರ ಗೋಸೇವೆ ವಿಶ್ವಕ್ಕೇ ಒಂದು ಆದರ್ಶ
 • ಆದ್ಯ ಶಂಕರಾಚಾರ್ಯರ ಅದ್ವೈತ ಮತ ಪುನಃ ಪ್ರತಿಷ್ಠಾಪನೆಯಲ್ಲಿ ಗೋವಿಗೆ ಉನ್ನತ ಸ್ಥಾನವಿತ್ತು.
 • ಕೌಟಿಲ್ಯನ ಅರ್ಥಶಾಸ್ತ್ರ : ಮೌರ್ಯರ ಕಾಲದ ಸಂವಿಧಾನ. ಚಾಣಕ್ಯ ನೀತಿ ಎಂದೂ ಪ್ರಸಿದ್ಧ. ಅದರಂತೆ ಆಡಳಿತ ಯಂತ್ರದಲ್ಲಿ ಗೋವು-ಹುಲ್ಲುಗಾವಲು-ಪಶು ಆಹಾರದ ನಿರ್ವಹಣೆಗೆ ‘ಗೋಧ್ಯಕ್ಷ’ ಎಂಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕಿತ್ತು. (ಕೌಟಿಲೀಯ ಅರ್ಥಶಾಸ್ತ್ರದ ೩ನೇ ಅಧಿಕರಣದ ‘ಗೋಧ್ಯಕ್ಷ’ ಅಧ್ಯಾಯ)
 • ಸಾಮ್ರಾಟ್ ಅಶೋಕ : ಭಾರತ ವೈಭವಶೀಲವಾಗಬೇಕಾದರೆ ಗೋವುಗಳ ಉನ್ನತಿ ಆಗಲೇಬೇಕು ಎಂಬ ಅಭಿಪ್ರಾಯ ಹೊಂದಿದ್ದ.
 • ಶಾತವಾಹನರ ಕಾಲದಲ್ಲಿ ಗೋದಾನ, ಗೋರಕ್ಷೆ ಅತ್ಯಂತ ಶ್ರೇಷ್ಠ ಕಾರ್ಯವಾಗಿತ್ತು.
 • ರಜಪೂತರು ಗೋ ಸಂರಕ್ಷಣೆಗಾಗಿ ಮಡಿಯಲೂ ಹಿಂಜರಿಯುತ್ತಿರಲಿಲ್ಲ. ಪೃಥ್ವೀರಾಜನ ಸನ್ನಿವೇಶವನ್ನೇ ನೋಡಬಹುದು. ಮಹಮ್ಮದ್ ಘೋರಿ ಬೇಕೆಂದೇ ಹಸುವಿನ ಮಂದೆಗಳನ್ನು ಮುಂದಿಟ್ಟುಕೊಂಡು ಪೃಥ್ವೀರಾಜನ ಮೇಲೆರಗಿದ. ಗೋವಧೆ ಮಾಡುವ ಹೃದಯ ಪೃಥ್ವೀರಾಜನಿಗೆ ಇಲ್ಲದ್ದರಿಂದ ಶಸ್ತ್ರ ತ್ಯಾಗ ಮಾಡಿ, ಘೋರಿಗೆ ಶರಣಾದ.
 • ಶಿವಾಜಿ, ಹಿಂದೂ ರಾಜರ ರಾಜ ಎಂದೇ ಪ್ರಸಿದ್ಧ. ಗೋವುಗಳ ಬಗೆಗೆ ಅವನಿಗಿದ್ದ ಕಾಳಜಿಯನ್ನು ಎತ್ತಿತೋರಿಸುವ ಸನ್ನಿವೇಶ ಸುಪ್ರಸಿದ್ಧ. ಶಿವಾಜಿ ೧೭ ವರ್ಷದವನಿದ್ದಾಗ ರಸ್ತೆಯೊಂದರಲ್ಲಿ ಕಟುಕನೊಬ್ಬ ಹಸುವೊಂದನ್ನು ದರದರ ಎಳೆದುಕೊಂಡು ಹೋಗುತ್ತಿದ್ದುದನ್ನು ನೋಡಿ, ಸಹಿಸಲು ಸಾಧ್ಯವಾಗದೇ ಅಲ್ಲೇ ಅವನ ಶಿರವನ್ನು ತುಂಡರಿಸಿದ.
 • ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ತನ್ನ ಮಗ ಹುಮಾಯೂನನಿಗೆ ಬರೆದ ಪತ್ರದಲ್ಲಿ ‘ಗೋವಧೆ ಎಂದಿಗೂ ಮಾಡಬಾರದು’ ಎಂಬ ಅಂಶವನ್ನು ಉಲ್ಲೇಖಿಸುತ್ತಾನೆ.
 • ಅಬ್ದುಲ್ ಫಜಲನ ಐನ್-ಎ-ಅಕ್ಬರಿಯ ಉಲ್ಲೇಖದಂತೆ : ಗೋವಿನ ಬಗೆಗೆ ಹಿಂದೂಗಳಿಗೆ ಪೂಜ್ಯ ಭಾವನೆಯಿದ್ದುದನ್ನು ಗ್ರಹಿಸಿದ ಅಕ್ಬರ್ ತನ್ನ ರಾಜ್ಯದಲ್ಲಿ ಗೋಮಾಂಸ ಬಳಕೆಗೆ ನಿಷೇಧ ಹೇರಿದ್ದನು.
 • ಮೊಘಲ್ ದೊರೆ ಜಹಾಂಗೀರನ ಕಾಲದಲ್ಲಿ ಗೋವಧೆಯನ್ನು ನಿಷೇಧಿಸಲಾಗಿತ್ತು ಹಾಗೂ ಗೋಹತ್ಯೆ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು ಎಂದು ಯಾತ್ರಿಕ ಬರ್ನಿಯರ್ ತನ್ನ ಪುಸ್ತಕದಲ್ಲಿ ಉಲ್ಲೇಖಿಸುತ್ತಾನೆ.
 • ವಿಜಯನಗರದ ಅರಸರ ಕಾಲದಲ್ಲಿ ಬಹುಜನರು ಮಾಂಸಾಹಾರಿಗಳಾಗಿದ್ದರೂ ಗೋಮಾಂಸವನ್ನು ಮಾತ್ರ ಸೇವಿಸುತ್ತಿರಲಿಲ್ಲ.
 • ಮೈಸೂರು ಸಂಸ್ಥಾನದ ಕಮಿಷನರ್ ಮಾರ್ಕ್ ಕಬ್ಬನ್ (೧೮೩೪-೧೮೬೧) : ರಾಜ್ಯದ ಆಡಳಿತವನ್ನು ಒಂಭತ್ತು ವಿಭಾಗಗಳಾಗಿ ವಿಂಗಡಿಸಿ, ಅದರಲ್ಲಿ ಪಶುಸಂಗೋಪನೆಯ ಸಲುವಾಗಿ ‘ಅಮೃತಮಹಲ್’ (ಕರ್ನಾಟಕದ ಹೆಮ್ಮಯ ಗೋ ತಳಿ) ಎಂಬ ವಿಭಾಗವನ್ನು ರೂಪಿಸಿದ್ದನು.
 • ಸುಪ್ರೀಂಕೋರ್ಟಿನ ೧೯೫೮ರ ತೀರ್ಪೊಂದರಲ್ಲಿ : ೧೮ನೇ ಶತಮಾನದ ಹೈದರಾಲಿಯು ‘ಗೋಹತ್ಯೆ ಮಾಡುವುದು ಎಲ್ಲಿಯಾದರೂ ಕಂಡುಬಂದಲ್ಲಿ, ಕಟುಕರ ಕೈಗಳನ್ನು ಕತ್ತರಿಸಬೇಕು’ ಎಂಬ ಫರ್ಮಾನು ಹೊರಡಿಸಿದ್ದರ ಉಲ್ಲೇಖ ಇದೆ.
 • ಅಮೃತ ಮಹಲ್ ಕಾವಲುಭೂಮಿ : ಅಮೃತ ಮಹಲ್ ಗೋತಳಿ ಸಂವರ್ಧನೆಗಾಗಿ ಮೈಸೂರು ಸಂಸ್ಥಾನದ ಆದ್ಯಂತ ೪,೧೩,೫೩೯ ಎಕರೆ ವಿಸ್ತಾರದ 240 ಹುಲ್ಲುಗಾವಲುಗಳನ್ನು ಮೀಸಲಾಗಿರಿಸಲಾಗಿತ್ತು. ೧೬೧೭ರ ಸುಮಾರಿನಲ್ಲಿ ಮೈಸೂರು ಸಂಸ್ಥಾನದ ಆಶ್ರಯದಲ್ಲಿ ಯೋಜನೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಬೆಣ್ಣೆಚಾವಡಿ ಹಸುಗಳಿಗಾಗಿ ಯೋಜನೆ ಪ್ರಾರಂಭವಾಯಿತು. ನಂತರ, ಟಿಪ್ಪು ಸುಲ್ತಾನನ ಕಾಲದಲ್ಲಿ ಬೆಣ್ಣೆಚಾವಡಿ ಹಸುಗಳಿಗೆ ‘ಅಮೃತ ಮಹಲ್’ ಎಂದು ಮರು ನಾಮಕರಣ ಮಾಡಿ, ಯೋಜನೆಗೆ ಮೀಸಲಾದ ಹುಲ್ಲುಗಾವಲುಗಳನ್ನು ‘ಅಮೃತ ಮಹಲ್ ಕಾವಲುಭೂಮಿ’ ಎಂದು ಹೆಸರಿಸಿದ.
 • ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮ : ಗೋವಿನ ಕಾರಣದಿಂದಲೇ ಪ್ರಾರಂಭಗೊಂಡದ್ದು. ಕಾಡತೂಸುಗಳಲ್ಲಿ ಗೋವಿನ ಮತ್ತು ಹಂದಿಯ ಕೊಬ್ಬನ್ನು ಬಳಸಿದ್ದಾರೆಂಬ ಸಂಗತಿ ಸಂಗ್ರಾಮಕ್ಕೆ ಕಿಚ್ಚನ್ನು ಹಚ್ಚಿತು.
 • ಮಾಧವರಾವ್ ಪೇಶ್ವೆ : ಪೇಶ್ವೆ ರಾಜರುಗಳಲ್ಲಿ ಅತ್ಯಂತ ಪ್ರಬಲ. ತನ್ನ ರಾಜ್ಯದಲ್ಲಿ ಗೋವಧೆಯನ್ನು ನಿಷೇಧಿಸಿದ್ದ. ‘ಗೋಭಕ್ಷಕರನ್ನು ಭಾರತದಿಂದಲೇ ಹೊಡೆದೋಡಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದ.
 • ೧೮೭೨ರ ಕುಕಾ ಆಂದೋಲನ : ಗೋವಧೆಯ ತಡೆಗಾಗಿ ನಡೆದ ಬಹುದೊಡ್ಡ ಆಂದೋಲನ. ನಾಮಧಾರಿ ಸಿಖ್ಖರ ನೇತೃತ್ವದಲ್ಲಿ ನಡೆಯಿತು. ಪಂಜಾಬಿನಲ್ಲಿ ಕಸಾಯಿಖಾನೆಗಳ ಸ್ಥಾಪನೆಯನ್ನು ವಿರೋಧಿಸಿ ನಡೆಸಲಾಯಿತು.
 • ವೀರ ಸಾವರ್ಕರ್, ಚಂದ್ರಶೇಖರ ಆಜಾದ್, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ವಲ್ಲಭ ಭಾಯಿ ಪಟೇಲ್, ಮಹಾತ್ಮಾ ಗಾಂಧೀಜೀ ಮೊದಲಾದ ಎಲ್ಲ ಸ್ವಾತಂತ್ರ್ಯ ಸೇನಾನಿಗಳು ಗೋಹತ್ಯೆಯ ವಿರುದ್ಧ ದನಿ ಎತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದೊಡನೆಯೇ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂಬ ಭಾರೀ ಆಶ್ವಾಸನೆಯನ್ನೂ ನೀಡಿದ್ದರು.
 • ಭಾರತ ಸಂವಿಧಾನದ ೪೮ನೇ ವಿಧಿಯಲ್ಲಿ ಗೋವಧೆ ನಿಷೇಧಿಸಬೇಕೆಂಬ ಉಲ್ಲೇಖವನ್ನು ಮಾಡಲಾಗಿದೆ.
 • ೧೯೬೬ರಲ್ಲಿ ಗೋಹತ್ಯಾ ನಿಷೇಧವನ್ನು ಆಗ್ರಹಿಸಿ ಲಕ್ಷಾಂತರ ಮಂದಿ ದೆಹಲಿಯ ಸಂಸತ್ ಭವನದ ಮೇಲೆ ಮುತ್ತಿಗೆ ಹಾಕಿದರು.
 • ಭಾರತ ಸಂಸತ್ತಿನಲ್ಲಿ ಗೋಹತ್ಯೆಯನ್ನು ವಿರೋಧಿಸಿ ಖಾಸಗಿ ಮಸೂದೆ ಮಂಡನೆ : ೧೯೭೯, ೧೯೮೫, ೧೯೯೦, ೧೯೯೪, ೧೯೯೬, ೧೯೯೯, ೨೦೦೦ದಲ್ಲಿ
 • ೧೯೮೨ರಲ್ಲಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಎಲ್ಲ ರಾಜ್ಯಗಳಿಗೂ ಬರೆದ ಪತ್ರದಲ್ಲಿ ಗೋಹತ್ಯೆ ನಿಷೇಧಿಸುವಂತೆ ಸೂಚಿಸಿದ್ದರು.
 • ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ್, ಛತ್ತೀಸ್‌ಘರ್ ರಾಜ್ಯಗಳಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸಲಾಗಿದೆ. ಕಾನೂನು ಮೊದಲ ಬಾರಿಗೆ ಗುಜರಾತ್‌ನಲ್ಲಿ ೧೯೪೪ರಲ್ಲಿ ಜಾರಿಯಾಯಿತು.
 • ೨೦೦೧ರಲ್ಲಿ ‘ರಾಷ್ಟ್ರೀಯ ಗೋಸೇವಾ ಆಯೋಗ’ದ ಸ್ಥಾಪನೆಯಾಗಿದೆ.
 • ಗೋಪಾಲ ಗೋವರ್ಧನ ಗೋಶಾಲೆ, ಪಥಮೇಡ, ರಾಜಸ್ಥಾನ : ಪೂಜ್ಯ ಶ್ರೀ ದತ್ತಶರಣಾನಂದಜೀ ಮಹಾರಾಜ್‌ರ ನೇತೃತ್ವದಲ್ಲಿ ನಡೆಯುತ್ತಿದೆ. ೧ ಲಕ್ಷಕ್ಕೂ ಅಧಿಕ ಗೋವುಗಳ ಪಾಲನೆ-ಪೋಷಣೆ ಮಾಡುತ್ತಿದ್ದಾರೆ.
 • ನಾಗಪುರದ ಗೋ ವಿಜ್ಞಾನ ಅನುಸಂಧಾನ ಕೇಂದ್ರದಲ್ಲಿ ಗೋವುಗಳ ಕುರಿತಾಗಿ ವಿಶೇಷ ಅಧ್ಯಯನ ನಡೆಯುತ್ತಿದೆ.
 • ಗೋವಿಗೆ ಸಂಬಂಧಿಸಿದಂತೆ 4 ಪೇಟೆಂಟ್ ಗಳು ಲಭಿಸಿವೆ.
 • ಕಾಮದುಘಾ ಯೋಜನೆ : ಶ್ರೀರಾಮಚಂದ್ರಾಪುರಮಠದ ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಯೋಜನೆಗೆ ನಾಲ್ಕು ಆಯಾಮಗಳು. ಭಾರತೀಯ ಗೋವಂಶದ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಹಾಗೂ ಸಂಬೋಧನೆ. ಇದರಡಿಯಲ್ಲಿ ಹೊಸನಗರದ ಅಮೃತಧಾರಾ ಗೋಲೋಕದಲ್ಲಿ ಉಳಿದಿರುವ ಮೂವ್ವತ್ತಮೂರು ಗೋತಳಿಗಳಲ್ಲಿ ೩೦ರ ಸಂರಕ್ಷಣೆ, ಸಂವರ್ಧನೆ ಮಾಡಲಾಗುತ್ತಿದೆ. ದೇಶದೆಲ್ಲೆಡೆ ೧೦೮ ಗೋಶಾಲೆಗಳನ್ನು ಸ್ಥಾಪಿಸುವ ಸಂಕಲ್ಪ ಇದೆ. ಈ ಯೋಜನೆಯ ‘ಆರ್ಥಿಕ ಲಾಭ ದೃಷ್ಟಿ’ ಗೋ ಸಾಕಾಣಿಕೆಗೆ ಮತ್ತಷ್ಟು ಚೈತನ್ಯವನ್ನು ತುಂಬುತ್ತಿದೆ.
 • ತಳಿ ಸಂವರ್ಧನಾ ಯೋಜನೆಗಳು : ಬಿಕಾನೇರ್‌ನಲ್ಲಿ ರಾಟಿ ತಳಿ, ಆಂಧ್ರಪ್ರದೇಶ-ಬೀದರ್‌ನಲ್ಲಿ ದೇವನಿ ತಳಿ, ಅಜ್ಜಂಪುರದಲ್ಲಿ (ಕರ್ನಾಟಕ) ಅಮೃತ ಮಹಲ್ ತಳಿ, ತುಮಕೂರಿನಲ್ಲಿ ಹಳ್ಳಿಕಾರ್ ತಳಿ, ಹಾವೇರಿಯಲ್ಲಿ ಖಿಲಾರಿ ತಳಿ, ಹೊಸನಗರದಲ್ಲಿ (ಕರ್ನಾಟಕ) ಕೃಷ್ಣಾತೀರ ತಳಿ, ಮುಳಿಯ-ಕೈರಂಗಳ-ಭಾನ್ಕುಳಿಯಲ್ಲಿ (ಕರ್ನಾಟಕ) ಮಲೆನಾಡು ಗಿಡ್ಡ ತಳಿ, ಬಜಕೂಡ್ಲಿನಲ್ಲಿ (ಕೇರಳ) ಕಾಸರಗೋಡು ತಳಿ. ಹರ್ಯಾಣ, ಥಾರ್‌ಪಾರ್ಕರ್ ತಳಿ ಸಂವರ್ಧನಾ ಕೇಂದ್ರಗಳೂ ಇವೆ.
 • ಸದ್ಯ, ಗೋ ಸಂರಕ್ಷಣಾ ಕೈಂಕರ್ಯದಲ್ಲಿ ಹಲವಾರು ಮಠಮಂದಿರಗಳು, ಸಂಘಸಂಸ್ಥೆಗಳು ಸಕ್ರಿಯವಾಗಿವೆ. ಅನಾಥ, ಅಶಕ್ತ ಪಶುಗಳ ಪಾಲನೆಯಲ್ಲಿ ದೇಶಾದ್ಯಂತ ವ್ಯಾಪಿಸಿರುವಪಿಂಜರಾಪೋಲ್ ಗೋಶಾಲೆಗಳ ಜಾಲ ಸುಪ್ರಸಿದ್ಧವಾಗಿದೆ.

ಜಗತ್ತಿನ ಉಳಿದೆಡೆಗಳಲ್ಲಿ :

 • ಕ್ಯೂಬಾ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ (ಫಿಡೆಲ್ ಕ್ಯಾಸ್ಪ್ರೋನ ಅವಧಿಯಲ್ಲಿ).
 • ಇರಾನಿನಲ್ಲಿ ಗೋಹತ್ಯಾ ನಿಷೇಧದ ಕಾನೂನಿದೆ.
 • ಇಂಡೋನೇಷ್ಯಾದ ನೂಪಾನಿಸದ ದ್ವೀಪದಲ್ಲಿ ಗೋಮಾಂಸ ಭಕ್ಷಣೆಗೆ ಬಹಿಷ್ಕಾರ ಹೇರಲಾಗಿದೆ.
 • ಬ್ರೆಜಿಲ್‌ನ ಜಾನುವಾರು ಸಂತತಿಯ ೯೮% ಆಕಳುಗಳು ಭಾರತದ ಓಂಗೋಲ್ ತಳಿಯವುಗಳು.
 • ಆಷ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ತಮ್ಮ ದೇಶದ ತಳಿ ಹಾಗೂ ನಮ್ಮ ಗೋ ತಳಿಗಳ ಸಂಕರದಿಂದ ‘ಬ್ರಾಹ್ಮನ್ ತಳಿ’ಯನ್ನು ರೂಪಿಸಿದ್ದಾರೆ.
 • ದಕ್ಷಿಣ ಆಫ್ರಿಕಾದಲ್ಲಿ ಇಂದಿಗೂ ೨೦ ಗೋವುಗಳನ್ನು ವಧುದಕ್ಷಿಣೆಯಾಗಿ ನೀಡುವ ಸಂಪ್ರದಾಯವಿದೆ.
 • ಬರ್ಮಾದಲ್ಲಿ ಗೋಹತ್ಯೆ ಮಾಡಿದವರನ್ನು ಗಲ್ಲಿಗೇರಿಸುತ್ತಿದ್ದರು.
 • ಅಪ್ಘಾನಿಸ್ಥಾನದ ೧೧೦ನೇ ಅಹಲ್ ಸುನ್ನತ್ ಗೋಹತ್ಯೆಯನ್ನು ನಿಷೇಧಿಸಿ ಫತ್ವಾ ಹೊರಡಿಸಿದ್ದನು.
 • ಸುಮೇರಿಯನ್ ಮತ್ತು ಬೆಬಿಲೋನಿಯನ್ ನಾಗರಿಕತೆಯ ಕಾಲದಲ್ಲಿ ಗೋಹತ್ಯಾ ನಿಷೇಧ ಕಾನೂನಿತ್ತು.

ಸಂವರ್ಧನೆಯ ವಿಶಿಷ್ಟ ಯೋಜನೆ

ಅಮೃತ ಮಹಲ್ ತಳಿ ಹಸುಗಳ ಸಂವರ್ಧನೆಯ ವಿಶಿಷ್ಟ ಯೋಜನೆ

ಅಖಂಡ ಭೂಮಂಡಲದಲ್ಲೇ ಅನನ್ಯ ಯೋಜನೆ

 • ಇದು ಮೈಸೂರು ಅರಸರ ಕಾಲದಲ್ಲಿ ರೂಪುಗೊಂಡ ವಿಶಿಷ್ಟ ಯೋಜನೆ.
 • ೧೬೧೭-೧೭೦೪ರ ವರೆಗೆ ಮೈಸೂರು ಸಂಸ್ಥಾನವನ್ನಾಳಿದ ಚಾಮರಾಜ ಒಡೆಯರ್, ಕಂಠೀರವ ನರಸರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಉಚ್ಛ್ರಾಯ ಸ್ಥತಿಯಲ್ಲಿತ್ತು.
 • ಯೋಜನೆ ಪ್ರಾರಂಭವಾಗಿದ್ದು ‘ಬೆಣ್ಣೆಚಾವಡಿ’ (ಈಗಿನ ಅಮೃತ ಮಹಲ್) ಹಸುಗಳಿಗಾಗಿ.
 • ಕರ್ನಾಟಕ ರಾಜ್ಯಾದ್ಯಂತ ೪,೧೩,೫೩೯ ಎಕರೆ ಪ್ರದೇಶದ ೨೪೦ ಹುಲ್ಲುಗಾವಲುಗಳನ್ನು ಈ ಯೋಜನೆಗಾಗಿಯೇ ಮೀಸಲಿಡಲಾಯಿತು.
 • ಅಜ್ಜಂಪುರ, ಬೀರೂರು, ಹಬ್ಬನಘಟ್ಟ, ಬಾಸೂರು, ಲಿಂಗದಹಳ್ಳಿ, ಅರಸೀಕೆರೆ ಯೋಜನೆಯ ಪ್ರಮುಖ ಕೇಂದ್ರಗಳಾಗಿದ್ದವು
 • ಟಿಪ್ಪು ಸುಲ್ತಾನ ‘ಬೆಣ್ಣೆಚಾವಡಿ’ ಹಸುಗಳಿಗೆ ‘ಅಮೃತ ಮಹಲ್’ ಎಂದು ಪುನರ್ ನಾಮಕರಣ ಮಾಡಿ, ಅವುಗಳಿಗೆ ಮೀಸಲಾದ ಭೂಮಿಯನ್ನು ‘ಅಮೃತ ಮಹಲ್ ಕಾವಲುಭೂಮಿ’ ಎಂದು ಗುರುತಿಸಿದ.
 • ಟಿಪ್ಪು ಈ ತಳಿಯ ಹಸುಗಳ ಅದ್ಭುತ ಕಾರ್ಯ ಸಾಮರ್ಥ್ಯವನ್ನು ಗುರುತಿಸಿ, ಯುದ್ಧ ಪಡೆಯ ಅಂಗವಾಗಿ ಪೋಷಿಸಲು ಪ್ರಾರಂಭಿಸಿದ. ಇಂದೂ ಕೂಡ ಈ ತಳಿಯಲ್ಲಿ ಹಸುಗಳಿಗಿಂತ ಹೋರಿಗಳಿಗೇ ಹೆಚ್ಚಿನ ಪ್ರಾಮುಖ್ಯತೆ ಇದೆ.
 • ನಾಯಿಗಳಿಗಿಂತಲೂ ಹೆಚ್ಚಿನ ಬದ್ಧತೆ, ಗುಂಡಿನ ಆರ್ಭಟಕ್ಕೂ ಬೆದರದ ಗುಂಡಿಗೆ ಇವುಗಳದ್ದಾಯಿತು.
 • ಯುದ್ಧ ಉದ್ದೇಶಿತ ಪೋಷಣೆಯಿಂದ ಈ ತಳಿಯ ಹಸುಗಳ ಹಾಲಿನ ಪ್ರಮಾಣ ೧೧ ಲೀಟರಿನಿಂದ ೨-೩ ಲೀಟರಿಗೆ ಕುಸಿಯಿತು. ಅದನ್ನು ೩ ಜನರೇಷನ್‌ಗಳಲ್ಲಿ ಸುಧಾರಿಸಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ. ಅದಕ್ಕೆ ೮-೧೦ ವರ್ಷಗಳು ತಗುಲಬಹುದು.
 • ಮೇವು ಒದಗಿಸುವ ಹೊರೆ ಇರಲಿಲ್ಲ : ಯೋಜನೆಗೆ ಸಮೃದ್ಧ ಭೂಮಿಯನ್ನು ಒದಗಿಸಿ, ಪ್ರಧಾನವಾಗಿ ೬ ಕೇಂದ್ರಗಳಾಗಿ ವಿಂಗಡಿಸಿದ್ದರಿಂದ ಒಂದು ಕೇಂದ್ರದಲ್ಲಿ ಮೇವು ಮುಗಿದೊಡನೆಯೇ (ಹಸುಗಳನ್ನು) ಮತ್ತೊಂದು ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಕಳುಹಿಸಲು ಯಾವುದೇ ಅಸ್ವಾಭಾವಿಕ ವ್ಯವಸ್ಥೆಗಳಿಗೆ ಶರಣು ಹೋಗದೇ, ಒಂದು ಕೇಂದ್ರದಿಂದ ಮತ್ತೊಂದಕ್ಕೆ ದೊಡ್ಡ ದೊಡ್ಡ ಮಾರ್ಗಗಳಲ್ಲಿ ಕಳುಹಿಸುವ ಅನುಕೂಲ ಮಾಡಿಕೊಂಡಿದ್ದರು.
 • ೧೯೪೭ರಲ್ಲಿ ದೇಶ ಸ್ವತಂತ್ರಗೊಂಡ ಅನಂತರದಲ್ಲಿ : ಕಾವಲು ಭೂಮಿ ಮೈಸೂರು ಸಂಸ್ಥಾನದಿಂದ ಕರ್ನಾಟಕ ಸರ್ಕಾರದ ವಶಕ್ಕೆ ಬಂದಿತು. ಆಗ ಯೋಜನಾ ವ್ಯಾಪ್ತಿಯಲ್ಲಿ ೫೦,೦೦೦ ಎಕರೆ ಭೂಮಿ ಉಳಿದಿತ್ತು.
 • ಇಂದು ಉಳಿದಿರುವ ಕಾವಲು ಭೂಮಿ : ದಾಖಲೆಗಳ ಪ್ರಕಾರ ಒಟ್ಟು ೨೨,೦೦೦ ಎಕರೆಯಷ್ಟಿದೆ. ಅಂದಾಜು ೧೫೦೦ ಹಸುಗಳಿವೆ.