ಗೋವಿನ ಸುತ್ತ…… ಮುಗಿಯದ ವೃತ್ತ

ಕಾಮಧೇನುವೇ ಕಲ್ಪವೃಕ್ಷವಾಗಿ, ಇಂದಿನ ಕೈಗಾರಿಕೆಗಳಲ್ಲಿ, ಔಷಧ ಉದ್ಯಮಗಳಲ್ಲಿ, ಸುಗಂಧ ದ್ರವ್ಯ ತಯಾರಿಕೆಯಲ್ಲಿ, ಸುರೂಪಿ ಚಿಕಿತ್ಸೆಯಲ್ಲಿ, ಯಂತ್ರೋಪಕರಣಗಳಲ್ಲಿ, ಬಣ್ಣದ ಫ್ಯಾಕ್ಟರಿಗಳಲ್ಲಿ, ಚಿತ್ರೋದ್ಯಮದಲ್ಲಿ ಕೊನೆಗೆ ಕಟ್ಟಡ ಸಾಮಗ್ರಿಗಳಲ್ಲಿ ಹೇಗೆ ಹಾಸು ಹೊಕ್ಕಾಗಿ ಬಳಕೆಯಾಗುತ್ತಿದೆ ಎಂಬುದರ ಸಂಕ್ಷಿಪ್ತ ಚಿತ್ರಣ

ಬಾಯಲ್ಲಿ ಚ್ಯೂಯಿಂಗ್ ಗಮ್ ಅಗಿಯುತ್ತ ನೀವು ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಮಬ್ಬುಗತ್ತಲಲ್ಲಿ ವೇಗವಾಗಿ ಕಾರಿನಲ್ಲಿ ಧಾವಿಸುತ್ತೀದ್ದೀರಿ. ಎದುರಿಗೆ ಏನೋ ಅಸ್ಪಷ್ಟ ಆಕೃತಿ ಕಂಡಂತಾಗಿ ಹಠಾತ್ ಬ್ರೇಕ್ ಹಾಕುತ್ತೀರಿ. ಕಿರ್ರೆಂದು ಕಿರುಚುತ್ತ ಕಾರಿನ ಚಕ್ರಗಳು ರಸ್ತೆಯ ನಡುವೆ ಮಲಗಿರುವ ಹಸುವಿನ ಒಂದಡಿ ದೂರದಲ್ಲಿ ನಿಲ್ಲುತ್ತವೆ. ಅಬ್ಬ, ಪುಣ್ಯಕೋಟಿಯ ಪುಣ್ಯ ಎಂದುಕೊಂಡು ನೀವು ಮೆಲ್ಲನೆ ಸುತ್ತು ಬಳಸಿ, ನಗರ ಸಭೆಯ ಆಡಳಿತವನ್ನು ಬಯ್ದುಕೊಳ್ಳುತ್ತ ಮುಂದೆ ಸಾಗುತ್ತೀರಿ.

ಆ ಹಸುವಿನ ಪ್ರಾಣ ಉಳಿಸಲು ಕಾರಣವಾಗಿದ್ದು ನಿಮ್ಮ ಕಾರಿನ ದಕ್ಷ ಬ್ರೇಕ್. ಅದು ಅಷ್ಟು ದಕ್ಷತೆಯಿಂದ ಕೆಲಸ ಮಾಡಲು ಕಾರಣ ಏನೆಂದರೆ ಅದರಲ್ಲಿರುವ ಬ್ರೇಕ್ ಫ್ಲುಯಿಡ್. ಅಂದರೆ, ಬ್ರೇಕ್ ಸಿಲಿಂಡರಿನಲ್ಲಿ ತುಂಬಿಕೊಂಡಿರುವ ಎಣ್ಣೆಯಂಥ ದ್ರವ.

ಆ ದ್ರವ ತಯಾರಾಗಿದ್ದು ಅದೆಷ್ಟೊ ಮೃತ ದನಗಳ ಶರೀರದಿಂದ ಪಡೆದ ಕೊಬ್ಬಿನ ಆಮ್ಲ. ಇಂದು ಜೀವಂತ ದನವನ್ನು ಉಳಿಸಿದ್ದು ಎಂದೋ ಸತ್ತು ಹೋದ ಇನ್ಯಾವುದೋ ದನ!

ಕಾರು ಆ ಕ್ಷಣದಲ್ಲಿ ನಿಲ್ಲಲು ಬ್ರೇಕ್ ಎಣ್ಣೆಯೊಂದೇ ಕಾರಣವಲ್ಲ, ಕಾರಿನ ಟಯರ್ ಕೂಡ ಅಷ್ಟೇ ಮುಖ್ಯ ಅಂತೀರಾ? ಹೌದು. ಆದರೆ ಕಾರಿನ ರಬ್ಬರಿಗೆ ವಿಶೇಷ ಹಿಡಿತಗುಣ ಬರುವಂತೆ ಮಾಡುವಲ್ಲಿ ಸ್ಟೀಯರಿಕ್ ಆಸಿಡ್ ಎಂಬ ರಸಾಯನವನ್ನು ಸೇರಿಸಿರುತ್ತಾರೆ. ಅದನ್ನು ದನದ ಕೊಬ್ಬಿನ ಎಣ್ಣೆಯಿಂದಲೇ ತಯಾರಿಸಿರುತ್ತಾರೆ.

ಸರಿ! ಬ್ರೇಕು, ಟಯರು…. ಇನ್ನೇನು ರಸ್ತೆಗೆ ಹಾಕಿದ ಡಾಂಬರಿನಲ್ಲೂ ದನದ ಅಂಶ ಇದೆ ಅಂತೀರೇನೊ ಎಂದು ರೇಗಿ ಹೊರಡಬೇಡಿ. ನಂಬಿದರೆ ನಂಬಿ, ರಸ್ತೆಗೆ ಹಾಕುವ ಟಾರ್ನಲ್ಲೂ ದನದ ಕೊಬ್ಬನ್ನು ಸೇರಿಸಿರುತ್ತಾರೆ!
ನಿಲ್ಲಿ ಇಲ್ಲಿಗೇ ನಿಂತಿಲ್ಲ.

ಮತ್ತೆ ನೀವು ಅಗಿಯುತ್ತಿದ್ದ ಚ್ಯೂಯಿಂಗ್ ಗಮ್ ಕೂಡ ಅಂಥದೇ ಮೃತ ದನದ ದೇಹದಿಂದ ಪಡೆದ ಕೊಲಾಜೆನ್ ಎಂಬ ದ್ರವ್ಯದ್ದೇ ಆಗಿದ್ದಿರಬಹುದು. ಅದರಲ್ಲಿ ವೆನಿಲ್ಲಾ ಸುಗಂಧವೂ ಇದ್ದರಂತೂ ಬಿಡಿ. ಮೊನ್ನೆ ತಾನೇ ಸುದ್ದಿಯಲ್ಲಿತ್ತಲ್ಲ, ಜಪಾನೀ ವಿಜ್ಞಾನಿಯೊಬ್ಬಳು ದನದ ಸೆಗಣಿಯನ್ನೇ ಸಂಸ್ಕರಿಸಿ ಕೃತಕ ವೆನಿಲ್ಲಾ ಪರಿಮಳವನ್ನು ಪಡೆಯಲು ಸಾಧ್ಯವೆಂದು ತೋರಿಸಿದ್ದು? ಆಕೆಗೆ ಆ ಸಾಧನೆಗೆ ‘ಇಗ್ ನೊಬೆಲ್’ ಪ್ರಶಸ್ತಿ ಸಿಕ್ಕಿದ್ದು?

ಇದು ಬರೀ ಆರಂಭ ಅನ್ನಿ. ಇಂದಿನ ಕೈಗಾರಿಕೆಯ ಯುಗದಲ್ಲಿ ಗೋಪುರಾಣ ಎಂಬುದು ಹೇಳಿದಷ್ಟೂ ಮುಗಿಯಲಾರದಷ್ಟಿದೆ. ಎಲ್ಲಿಂದ ಆರಂಭಿಸೋಣ?

ಗೋವು ಬದುಕಿದ್ದಾಗ ಏನೆಲ್ಲ ಉಪಕಾರ ಮಾಡುತ್ತದೆಂದು ನಮಗೆ ಗೊತ್ತು. ಅದರ ಚರ್ವಿತ ಚರ್ವಣ ಬೇಡ.

ಪಾಶ್ಚಾತ್ಯ ದೇಶಗಳಲ್ಲಿ ಗೋಸಂಗೋಪನೆ ಎಂಬುದು ಒಂದು ದೊಡ್ಡ ಉದ್ಯಮವಾಗಿದೆ. ಒಂದೊಂದು ರ್ಯಾಂಚ್ನಲ್ಲಿ ಅನೇಕ ಸಾವಿರ ದನಗಳಿರುತ್ತವೆ. ಅಮೆರಿಕದ ಡಿಮಾಯ್ನ್ ನಗರದ ಹೊರವಲಯದಲ್ಲಿ ನಾನು ಭೇಟಿ ನೀಡಿದ್ದ ಒಂದು ರ್ಯಾಂಚ್ನಲ್ಲಿ ಮೂರುವರೆ ಸಾವಿರ ದನಗಳಿದ್ದವು. ಅಲ್ಲಿ ದಿನವೂ ನೂರಾರು ಗರ್ಭಿಣಿ ದನಗಳು ಕರು ಹಾಕುತ್ತಿರುತ್ತವೆ. ಆಗ ಗರ್ಭದಿಂದ ಹೊರ ಬೀಳುವ ಸೆತ್ತೆಗಳನ್ನು ಸಂಗ್ರಹಿಸಿ ಅದರಿಂದ ನಾನಾ ಬಗೆಯ ಔಷಧ ದ್ರವ್ಯಗಳನ್ನೂ ಶೃಂಗಾರ

ಪರಿಕರಗಳನ್ನೂ ತಯಾರಿಸುತ್ತಾರೆ. ಅದನ್ನೂ ನಾವಿಲ್ಲಿ ಚರ್ಚೆಗೆ ಎತ್ತಿಕೊಳ್ಳುವುದು ಬೇಡ.

ದನವೊಂದು ಸತ್ತ ನಂತರ ಏನೇನು ಸಿಗುತ್ತದೆ ಎಂಬಲ್ಲಿಂದ ನೋಡೋಣ:
‘ಬಳಸಿದ್ದನ್ನೇ ಮತ್ತೆ ಬಳಸಿ; ಬಿಸಾಕುವ ಬದಲು ಮರುಬಳಕೆ ಮಾಡಿ’ ಎಂಬುದು ವೇದ ಮಂತ್ರದಷ್ಟೇ ಮಹತ್ವದ ಸಂದೇಶವಾಗುತ್ತಿರುವ ಯುಗದಲ್ಲಿ ನಾವಿದ್ದೇವೆ. ಅಂಥ ಮರುಬಳಕೆಯ ಪರಮೋಚ್ಚ ಉದಾಹರಣೆ ಎಂದರೆ ನಾವು ಹಿಂದೂಗಳು ಪೂಜಿಸುವ ಗೋವು. ಭಾರತದ ಸಾಂಪ್ರದಾಯಿಕ ಸಮುದಾಯದಲ್ಲಿ ಗೋವುಗಳ ಮರುಬಳಕೆ ಎಂದರೆ ನಮಗೆ ಗೊತ್ತಿರುವುದು ಇಷ್ಟೆ:

ಒಂದು ಹಸು ಅಥವಾ ಎತ್ತು ಸತ್ತರೆ ಅದರ ಚರ್ಮವನ್ನು ಸುಲಿದು ಯಾರೋ ಪಾದರಕ್ಷೆ, ಬೆಲ್ಟ್ ಇತ್ಯಾದಿ ಮಾಡಲೆಂದು ಒಯ್ಯುತ್ತಾರೆ. ದನಗಳ ಗೊರಸು, ಕೋಡುಗಳಿಂದಲೇ ‘ಜೆಲ್ಲಿ’ ಎಂಬ ಅಂಟು ಪದಾರ್ಥವನ್ನು ತಯಾರಿಸುತ್ತಾರೆ ಅನ್ನೋದು ಗೊತ್ತಿತ್ತು. ಅದು ಬಿಟ್ಟರೆ ಈಚೆಗೆ ಬೆಂಗಳೂರಿನ ಬಳಿ ಎಲ್ಲೋ ‘ಬೋನ್ ಮೀಲ್’ ಎಂಬ ಫ್ಯಾಕ್ಟರಿ ಆರಂಭವಾಗಿದೆಯಂತೆ; ಅದರಲ್ಲಿ ದನಗಳ ಮೂಳೆಯನ್ನು ಪುಡಿಮಾಡಿ ಗೊಬ್ಬರಕ್ಕೋ ಇನ್ಯಾವುದಕ್ಕೊ ಬಳಸುತ್ತಾರಂತೆ.

ಅದಂತೆ ಇದಂತೆ.
ಅಲ್ಲಿಂದಾಚೆ ಏನು?

ಇಂಗ್ಲಂಡಿನಲ್ಲಿ ದನಗಳಿಗೆ ಸಿಜೆಡಿಅಂದರೆ ಹುಚ್ಚು ಹಸು ರೋಗ ಕಾಣಿಸಿಕೊಂಡಾಗ ಅದೆಂಥದೊ ಮಹಾ ಪಿಡುಗು ಬಂದಂತೆ ಪಾಶ್ಚಾತ್ಯ ಜಗತ್ತು ತತ್ತರಿಸಿತು. ಗೋಮಾಂಸವನ್ನು ತಿಂದ ಕೆಲವರು ಅದೇ ರೋಗದಿಂದ ನರಳಿ ಸತ್ತಿದ್ದೂ ಬೆಳಕಿಗೆ ಬಂತು. ಅದಕ್ಕೇ ಆರೆಂಟು ಲಕ್ಷ ಗೋವುಗಳನ್ನು ವಧೆ ಮಾಡಿ, ಜಗತ್ತಿಗೆಲ್ಲ ಗೊತ್ತಾಗುವಂತೆ ಟಿವಿ ಕ್ಯಾಮರಾ ಎದುರೇ ಸುಟ್ಟು ಹೂಳಲಾಯಿತು. ಇಂದು ದನವನ್ನು ಬೇರೆ ಯಾವ ಯಾವ ರೂಪಗಳಲ್ಲಿ ನಾವು ಬಳಸುತ್ತಿದ್ದೇವೆ ಎಂಬುದರ ಉದ್ದುದ್ದ ಪಟ್ಟಿಗಳೇ ಆ ಸಂದರ್ಭದಲ್ಲಿ ಚರ್ಚೆಗೆ ಬಂದವು. ಅವುಗಳಿಂದ ಸಂಗ್ರಹಿಸಿದ ಮಾಹಿತಿಗಳಲ್ಲಿ ಕೆಲವು ಮಾತ್ರ ಇಲ್ಲಿವೆ:

ಉದಾಹರಣೆಗೆ, ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳ ಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ರಕ್ತ ಗರಣೆಗಟ್ಟದ ಹಾಗೆ ತಡೆಯಲು, ವಿಶೇಷವಾಗಿ ಗ್ಯಾಂಗ್ರೀನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರಿನಾಲಿನ್ ಗ್ರಂಥಿಗಳಿಂದ ಸ್ಟಿರಾಯಿಡ್ಗಳನ್ನು ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಇದೇ ಗ್ರಂಥಿಗಳಿಂದ ಎಪಿನೆಫ್ರಿನ್ ಎಂಬ ಔಷಧವನ್ನು ಉತ್ಪಾದಿಸಿ ಅದನ್ನು ರಕ್ತದ ಒತ್ತಡವನ್ನು ಹೆಚ್ಚಿಸಲು ಬಳಸುತ್ತಾರೆ. ಹೃದ್ರೋಗ ಚಿಕಿತ್ಸೆಗಂತೂ ಇದು ಬೇಕೇ ಬೇಕು. ದನದ ಯಕೃತ್ತಿನಿಂದ ಬಿ-೧೨, ಲಿವರ್ ಎಕ್ಸ್ಟ್ರ್ಯಾಕ್ಟ್ ಔಷಧಗಳು ತಯಾರಾಗುತ್ತವೆ. ಹಾಗೆಯೇ ಮಧುಮೇಹಿಗಳಿಗೆ ಬೇಕಾದ ಇನ್ಸೂಲಿನ್ನನ್ನು ದನಗಳ ಮೇಧೋಜೀರಕ ಗ್ರಂಥಿಗಳಿಂದ ಪಡೆಯಲಾಗುತ್ತದೆ. ಇನ್ನು ಕೀಲುನೋವು, ಸಂಧಿವಾತದಿಂದ ಬಳಲುವವರಿಗೆ ಕೊಡುವ ಕೊಂಡ್ರಾಯಿಟಿನ್ ಸಲ್ಫೇಟ್ ಎಂಬ ಔಷಧವನ್ನು ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದಲೇ ತಯಾರಿಸುತ್ತಾರೆ. ದನದ ಮಿದುಳಿನ ದಟ್ಟ ನಾರಿನಂಥ ಹೊರಗವಚವನ್ನು (ಡ್ಯುರಾ ಮೇಟರ್) ಮನುಷ್ಯರ ಮಿದುಳಿನ ಶಸ್ತ್ರಚಿಕಿತ್ಸೆ ಮಾಡುವಾಗ ತಲೆಬುರುಡೆಯ ಖಾಲಿ ಜಾಗವನ್ನು ತುಂಬಲು ಬಳಸಲಾಗುತ್ತದೆ.

ದನದ ಕರುಳನ್ನು ಉಪ್ಪಿನಲ್ಲಿ ಒಣಗಿಸಿ ಕೊಳವೆಯಂತೆ ಕತ್ತರಿಸಿ ಅದರಲ್ಲಿ ಮಸಾಲೆ ಮಾಂಸ ತುಂಬಿ ಕರಿದು ‘ಸಾಸೇಜ್’ ಎಂಬ ತಿಂಡಿಯನ್ನು ತಯಾರಿಸಲಾಗುತ್ತದೆ. ಕರುಳನ್ನು ದಾರದಂತೆ ಸೀಳಿ, ಗಾಯಕ್ಕೆ ಹೊಲಿಗೆ ಹಾಕುವ ದಾರವನ್ನಾಗಿ ಬಳಸಲಾಗುತ್ತದೆ.

ದನಗಳ ಪಿತ್ತಕೋಶದ ಕಲ್ಲುಗಳನ್ನು ಪಾಲಿಶ್ ಮಾಡಿ ಆಭರಣ ತಯಾರಕರು ಹರಳುಗಳಂತೆ ಕೂರಿಸುತ್ತಾರೆ. ಪ್ಲೈವುಡ್ನಲ್ಲಿ ಕಟ್ಟಿಗೆಯ ತೆಳು ಹಾಳೆಗಳನ್ನು ಅಂಟಿಸಲು ದನಗಳ ರಕ್ತವನ್ನು ಗೋಂದಿನಂತೆ ಸಾಂದ್ರೀಕರಿಸಿ ಬಳಸುತ್ತಾರೆ. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಉಪಯೋಗಿಸುವ ಅಗ್ನಿಶಾಮಕ ನೊರೆಯನ್ನೂ ದನಗಳ ರಕ್ತದ ಪುಡಿಯಿಂದಲೇ ತಯಾರಿಸಲಾಗುತ್ತದೆ. ಮಿಕ್ಕಿದ ಪುಡಿ ರಸಗೊಬ್ಬರದ ಉತ್ಪಾದನೆಗೆ ಹೋಗುತ್ತದೆ. ಕೃಷಿ ಕೆಲಸದಲ್ಲಿ ದುಡಿಯುವ ಮಹಿಳೆ ತೀರ ದುರ್ಬಲಳಾಗಿದ್ದರೆ ಅನೀಮಿಯಾ ಕಾಯಿಲೆ ಇದೆಯೆಂದು ಡಾಕ್ಟರು ಬರೆದುಕೊಡುವ ಐರನ್ ಟ್ಯಾಬ್ಲೆಟ್ಗೂ ದನದ ರಕ್ತವೇ ಮೂಲದ್ರವ್ಯ.

ದನಗಳ ಎಲುಬಿನ ಪುಡಿಯಿಂದಲೇ ಸಕ್ಕರೆಗೆ ಅಚ್ಚ ಬಿಳಿಬಣ್ಣ ಬರುತ್ತದೆ. ಪಿಂಗಾಣಿ ವಸ್ತುಗಳ ತಯಾರಿಕೆಯಲ್ಲೂ ಇದು ಬೇಕೇ ಬೇಕು. ಅತ್ಯಚ್ಚ ಗುಣಮಟ್ಟದ ವಿಶೇಷ ಉಕ್ಕಿನ ತಯಾರಿಕೆಗೆ ಮೂಳೆಪುಡಿಯನ್ನು ಸೇರಿಸಬೇಕಾಗುತ್ತದೆ. ಎಲುಬಿನಿಂದ ತಯಾರಿಸಲಾದ ಬಟನ್ಗಳಿಗೆ ಈ ಪ್ಲಾಸ್ಟಿಕ್ ಯುಗದಲ್ಲೂ ಬೇಡಿಕೆ ಇದೆ.

ದನಗಳ ಎಲುಬು ಮತ್ತು ಕೊಬ್ಬು ಎರಡರಿಂದಲೂ ಟ್ಯಾಲೊ ಎಂಬ ವಿಶೇಷ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಭಕ್ಷಣೆಗೆ ಯೋಗ್ಯವಲ್ಲದ ಟ್ಯಾಲೊ ಎಣ್ಣೆಯನ್ನು ಬ್ರೇಕ್ ದ್ರವ ಮತ್ತು ಜೆಟ್ ವಿಮಾನಗಳ ಕೀಲೆಣ್ಣೆಯನ್ನು ಉತ್ಪಾದನೆಗೆ ಕಚ್ಚಾ ಪದಾರ್ಥವಾಗಿ ಬಳಸುತ್ತಾರೆ. ಮೋಂಬತ್ತಿಗೆ ಇದೇ ಮೂಲವಸ್ತು. ನಟನಟಿಯರು ಕೃತಕ ಕಣ್ಣೀರು ಹರಿಸಲೆಂದು ಬಳಿದುಕೊಳ್ಳುವ ಗ್ಲಿಸರೀನ್ ಕೂಡ ಇದೇ ಟ್ಯಾಲೊದಿಂದಲೇ ಬರುತ್ತದೆ. ಇದರಿಂದ ಸಾಬೂನು, ಡಿಟರ್ಜಂಟ್ಗಳೂ ತಯಾರಾಗುತ್ತವೆ. ವಿವಿಧ ಬಗೆಯ ಕಿವಿಗೆ ಹಾಕುವ ಹನಿಗಳು, ಕಣ್ಣಿಗೆ ಹಾಕುವ ಹನಿಗಳು, ಕೆಮ್ಮಿನ ಔಷಧಗಳು, ಹೇರ್ ಕಂಡೀಶನರ್ಗಳು, ಶಾಂಪೂಗಳು ಎಲ್ಲವಕ್ಕೂ ಗ್ಲಿಸರೀನೇ ಮೂಲದ್ರವ್ಯ. ಇದರಿಂದಲೇ ಬಣ್ಣ ಬಣ್ಣದ ಇಂಕು, ಕಾರುಗಳ ಪೇಂಟ್ ಮೇಲೆ ಹಚ್ಚುವ ಪಾಲಿಶ್ಗಳು, ಕಾರಿನ ಇಂಧನ ಚಳಿಯಲ್ಲೂ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಆಂಟಿಫ್ರೀಝ್ ಮಿಶ್ರಣಗಳು ಎಲ್ಲವಕ್ಕೂ ಗ್ಲಿಸರೀನ್ ಬೇಕು.

ಕಣ್ಣೀರು ಹಾಗಿರಲಿ, ಸಹಜ ನೀರೂ ತೊಟ್ಟಿಕ್ಕದಂತೆ ವಾಟರ್ ಪ್ರೂಫಿಂಗ್ ಅಂಟುಗಳ ತಯಾರಿಕೆಗೂ ಕಚ್ಚಾ ಟ್ಯಾಲೊ ಬಳಕೆಯಾಗುತ್ತದೆ. ಆಹಾರವಸ್ತುಗಳನ್ನು ಪ್ಯಾಕಿಂಗ್ ಮಾಡಲು ಬೇಕಾದ ವಿಶೇಷ ಬಗೆಯ ಎಣ್ಣೆಕಾಗದವೂ ಇದರಿಂದಲೇ ತಯಾರಾಗುತ್ತದೆ. ನಾನಾ ಬಗೆಯ ಆಂಟಿಬಯಾಟಿಕ್ ಔಷಧಗಳೂ ಕೂಡ.

ಇನ್ನು ಮೂಳೆ, ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯಯೋಗ್ಯ ಟ್ಯಾಲೊ ಎಣ್ಣೆ ದೊರಕುತ್ತದೆ. ಇದು ಚ್ಯೂಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ.

ದನಗಳ ಅಂಗಾಂಶಗಳನ್ನು ಜೋಡಿಸುವ ಕೊಲಾಜೆನ್ ಎಂಬ ದ್ರವ್ಯಕ್ಕೆ ಭಾರೀ ಬೇಡಿಕೆ ಇದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜೆನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರ ವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚುಮದ್ದಿನ ಔಷಧವಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್ಗಳ ತಯಾರಿಕೆಗೆ ಇದೇ ಬೇಕು. ಗಾಯ ಒಣಗಿದ ನಂತರ ಆಳವಾದ ಗೀರು ಬಿದ್ದಿದ್ದರೆ, ಸುರೂಪ ಚಿಕಿತ್ಸಕರು ಅದನ್ನು ಮರೆಮಾಚಲೆಂದು ಕೊಲಾಜೆನ್ ತುಂಬುತ್ತಾರೆ. ಕಣ್ಣಿನ ಪೊರೆ ನಿವಾರಣೆಗೆ ಪಾಪೆ ಕವಚವಾಗಿ ಕೂಡ ಇದು ನೆರವಿಗೆ ಬರುತ್ತದೆ. ಇನ್ನು ಖಾದ್ಯ ಉದ್ಯಮದಲ್ಲಂತೂ ಇದೇ ಕೊಲಾಜೆನ್ ಪಾತ್ರವನ್ನು ಹೇಳುವುದೇ ಬೇಡ. ಜಿಲೆಟಿನ್ ಪುಡಿ ಇದರಿಂದಲೇ ತಯಾರಾಗುತ್ತದೆ. ಜೆಲ್ಲಿ, ಜಾಮ್ಗಳಿಗೆ ಇದಿಲ್ಲದಿದ್ದರೆ ಆಗುವುದಿಲ್ಲ.

ಬಹಳಷ್ಟು ಸೌಂದರ್ಯ ವರ್ಧಕ ದ್ರವ್ಯಗಳಲ್ಲಿ ಕೊಲಾಜೆನ್ ಕ್ರೀಮ್ ಇದ್ದೇ ಇರುತ್ತದೆ. ಜತೆಗೆ ತರಾವರಿ ಮುಲಾಮು, ನೋವು ನಿವಾರಕ ಎಣ್ಣೆಗೆಲ್ಲ ಇದೇ ಬೇಕು. ಫೊಟೊಗ್ರಫಿ, ಸಿನಿಮಾ ಫಿಲ್ಮ್ ತಯಾರಿಕೆಗೂ ಇದು ಕಚ್ಚಾವಸ್ತುವಾಗಿ ಬಳಕೆಯಾಗುತ್ತದೆ. ಸಿನೆಮಾ ನಟ ನಟಿಯರ ಮುಖದಲ್ಲಿ ಸುಕ್ಕುಗಳು ಕಾಣಿಸದಂತೆ ಬಳಸುವ ವೃದ್ಧಾಪ್ಯನಿರೋಧಕ ಕ್ರೀಮ್ ಕೂಡ ಇದರಿಂದಲೇ ತಯಾರಾಗುತವೆ.

ಮಲಿನ ಗಾಳಿಯನ್ನು ಸೋಸಲು ಇಂದು ಬಳಕೆಯಾಗುತ್ತಿರುವ ವಿಧವಿಧದ ಫಿಲ್ಟರ್ಗಳನ್ನು ದನಗಳ ಕೂದಲಿನಿಂದ ತಯಾರಿಸಲಾಗುತ್ತದೆ. ನೀವು ಕೂತಿದ್ದ ಕಾರಿನ ಕುಶನ್ ತುಂಬಾ ದುಬಾರಿಯದಾಗಿದ್ದರೆ, ಅದು ವಿಶೇಷವಾಗಿ ಸಂಸ್ಕರಿಸಿದ ದನದ ಚರ್ಮದ್ದೇ ಇದ್ದೀತು.

ಇದು ಸಂಕ್ಷಿಪ್ತ ಗೋಚರಿತ್ರೆ. ಇಷ್ಟೆಲ್ಲ ವಿಧಗಳಲ್ಲಿ ಕೈಗಾರಿಕೆಗಳಲ್ಲಿ ಬಳಕೆಯಾದ ನಂತರವೂ ಇನ್ನಷ್ಟು ಗೋದ್ರವ್ಯಗಳು ಕಸಾಯಿಖಾನೆಗಳಲ್ಲಿ ಉಳಿದಿರುತ್ತವೆ. ಅವನ್ನೆಲ್ಲ ಬಾಚಿ ಒಣಗಿಸಿ ಪುಡಿ ಮಾಡಿ, ಪಶು ಆಹಾರವಾಗಿ ಗೋವುಗಳಿಗೆ ತಿನ್ನಿಸಿದ್ದರಿಂದಲೇ ಅವುಗಳ ಶರೀರದಲ್ಲಿ ಪ್ರಯಾನ್ ಎಂಬ ಪ್ರಳಯಕಾರಿ ಪ್ರೋಟೀನುಗಳು ಉತ್ಪಾದನೆಯಾಗಿ ಹುಚ್ಚುಹಸು ಕಾಯಿಲೆ ಬಂತೆಂದು ಹೇಳಲಾಗುತ್ತದೆ. ಕಸಾಯಿಖಾನೆಯ ಉಳಿಕೆ ಕಚಡಾ ವಸ್ತುಗಳನ್ನು ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಇಂಧನವಾಗಿ ಉರಿಸುವ ಸಂಪ್ರದಾಯ ಆರಂಭವಾಗಿದೆ.

ಸರಿ, ವಿದ್ಯುತ್ ಉತ್ಪಾದನೆಯ ನಂತರವಾದರೂ ಕತೆ ಮುಗಿಯಿತೆ? ಇಲ್ಲ ನಿಲ್ಲಿ. ಉರಿಸಿದ ನಂತರ ಉಳಿಯುವ ಹಾರುಬೂದಿಯನ್ನು ಏನು ಮಾಡೋಣ? ಅದರಲ್ಲಿ ಕೆಲವು ಪಾಲು ಹೊಲ ಗದ್ದೆಗಳಿಗೆ ಹೋಗುತ್ತವೆ. ಇನ್ನು ಕೆಲವು ಪಾಲನ್ನು ಮನೆಕಟ್ಟುವ ಇಟ್ಟಿಗೆಯಾಗಿ ಪರಿವರ್ತಿಸಲಾಗುತ್ತದೆ.

ಅಮೃತಶಿಲೆಯ ಮಹಲುಗಳಿಗೇನೂ ಇಂಥ ಇಟ್ಟಿಗೆಗಳು ಬಳಕೆಯಾಗಲಿಕ್ಕಿಲ್ಲ. ಆದರೆ ದನದ ಕೊಟ್ಟಿಗೆಗಳ ನಿರ್ಮಾಣಕ್ಕಂತೂ ಇವು ಧಾರಾಳ ನೆರವಿಗೆ ಬರುತ್ತವೆ.

ಇದು ಮುಗಿಯುವ ಕತೆಯೇ ಅಲ್ಲ ಎನ್ನುತ್ತ ಪುಟ ಮಗುಚಿ ಎದ್ದು ಹೊರಟಿರಾ? ಹೊರಡುವ ಮುನ್ನ ಇಲ್ಲಿ ಮುದ್ರಿತವಾದ ಅಕ್ಷರಗಳತ್ತ ಒಮ್ಮೆ ಕಣ್ಣು ಹಾಯಿಸಿ. ಇದಕ್ಕೆ ಬಳಸಿದ ಇಂಕಿನಲ್ಲಿ ಕೂಡ ಗೋವಿನ ಅಂಶವಿದೆ.

– ನಾಗೇಶ ಹೆಗಡೆ

ಕೃಪೆ : ಗೋ ವಿಶ್ವ