ಕಸಾಯಿಖಾನೆಯಲ್ಲಿ ಕೊನೆಯ ಕ್ಷಣಗಳನ್ನು ಎದುರಿಸುತ್ತಿರುವ ಐದು ಓಂಗೋಲ್ ಹೋರಿಗಳ ರಕ್ಷಣೆ

ಕಾಸರಗೋಡಿನ ಪೆರಿಯ ಬಳಿ ಕಸಾಯಿಖಾನೆಯೊಂದರಲ್ಲಿ ಬೃಹತ್ತಾದ ಐದು ಓಂಗೋಲ್ ಹೋರಿಗಳು ಇರುವುದು ಗೋಭಕ್ತರೊಬ್ಬರ ಕಣ್ಣಿಗೆ ಬಿತ್ತು. ಕಾಸರಗೋಡಿನ ಪೆರಿಯದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಾ ಇರುವ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಇರುವ ಗೋಲೋಕ ಎಂಬ ಗೋಶಾಲೆಯ ಸಂಚಾಲಕರೂ ಗುರುಭಕ್ತರೂ ಆಗಿರುವ ವಿಷ್ಣುಹೆಬ್ಬಾರ್ ಅವರ ಸಂಬಂಧಿಯಾದ ಈ ಗೋಭಕ್ತ ಪೆರಿಯ ಸುಬ್ರಹ್ಮಣ್ಯ ಅವರ ಸುಪ್ತಮನಸ್ಸು ಎಚ್ಚೆತ್ತು ಫೋನ್ ಸಂದೇಶವಾಗಿ ಹೊರಟು ಅದು ಈಗಾಗಲೇ ಗೋರಕ್ಷಾ ವಿಚಾರದಲ್ಲಿಯೇ ದೇಶದಲ್ಲಿ ಕ್ರಾಂತಿಯೆಬ್ಬಿಸಿದ ಶ್ರೀ ರಾಮಚಂದ್ರಾಪುರ ಮಠ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಗಮನಕ್ಕೆ ಬಂತು.

ತಕ್ಷಣ ಶ್ರೀ ಮಠದ ಕಾಮದುಘಾ ಗೋರಕ್ಷಾ ವಿಭಾಗ ಸಂಚಾಲಕರಾದ ಡಾ ವೈ ವಿ ಕೃಷ್ಣಮೂರ್ತಿ ಅವರ ಮೂಲಕ ರಕ್ಷಣಾ ಜಾಲ ಕಾರ್ಯಪ್ರವೃತ್ತವಾಯಿತು.

ಶ್ರೀರಾಮಚಂದ್ರಾಪುರ ಮಠದ ಗೋಸಂಜೀವಿನಿ ವಿಭಾಗವು ಈ ಹೋರಿಗಳನ್ನು ರಕ್ಷಿಸಲು ಮುಂದಾಯಿತು. ಕಸಾಯಿಯವರ ಜೊತೆ ಚರ್ಚಿಸಿದಾಗ ಒಂದೊಂದು ಹೋರಿಗೂ ₹70 ರಿಂದ 80,000/- ರೂಗಳ ಬೆಲೆ ಇದೆ, 11:30ರ ಒಳಗೆ ಅಷ್ಟು ಹಣವನ್ನು ಕೊಟ್ಟಲ್ಲಿ ಆ ಹೋರಿಗಳನ್ನು ಬಿಟ್ಟುಕಳುಹಿಸುವುದಾಗಿಯೂ ಇಲ್ಲವಾದಲ್ಲಿ ಆ ಹೋರಿಗಳು ಜೀವಂತ ಉಳಿಯಲಾರವು ಎಂಬ ಮಾಹಿತಿ ಬಂತು.

ಸಾಮಾಜಿಕ ಜಾಲತಾಣಗಳಲ್ಲೂ ವಿಷಯ ಹರಿದಾಡಿತು. ವಿಚಾರದ ಗಂಭೀರತೆಯನ್ನರಿತ ಗುರು ಗೋಭಕ್ತರು ಗೋಸಂಜೀವಿನಿಗೆ ದೇಣಿಗೆ ನೀಡಲಾರಂಭಿಸಿದರು. ತಕ್ಷಣ ಶ್ರೀರಾಮಚಂದ್ರಾಪುರಮಠದ ಶ್ರೀ ಸಂಸ್ಥಾನದವರ ನಿರ್ದೇಶನದಲ್ಲಿ ಕಾರ್ಯಕರ್ತರು ಕಸಾಯಿಖಾನೆಗೆ ತಲಪಿ ಅವರಲ್ಲಿ ಸಮಾಲೋಚನೆ ಮಾಡಿ ಅಲ್ಲಿರುವ ಐದೂ ಓಂಗೋಲ್ ಹೋರಿಗಳನ್ನು ವಿಕ್ರಯ ಮಾಡಿ ಪಡೆದು ಬಳಿಕ ಕಾಲ್ನಡೆಯಾಗಿ ಸಾಗಿ ಪೆರಿಯ ಶ್ರೀ ವಿಷ್ಣು ಹೆಬ್ಬಾರ್ ಅವರ ಗೋಲೋಕಕ್ಕೆ ತಲಪಿಸಲಾಗಿದೆ. ತಂಡದಲ್ಲಿ ತಿರುಮಲೇಶ್ವರ ಪ್ರಸನ್ನ, ಡಾ ಜಯಪ್ರಕಾಶ್ ಲಾಡ, ಶ್ರೀಕೃಷ್ಣ ಭಟ್ ಮೀನಗದ್ದೆ, ಮುರಳಿ ಮೊಗ್ರಾಲ್, ಪೆರಿಯ ಗೋಲೋಕದ ಕಾರ್ಯಕರ್ತರು ಕಾರ್ಯಪ್ರವೃತ್ತರಾದರು.

ಶ್ರೀ ರಾಮಚಂದ್ರಾಪುರ ಮಠದ ಗೋರಕ್ಷಾ ವಿಭಾಗದ ಹಲವು ಘಟನೆಗಳಲ್ಲಿ ಈ ಪುಣ್ಯಘಟನೆಯೂ ಉಲ್ಲೇಖಿಸಲ್ಪಟ್ಟಿತ್ತು.
ಹೀಗೆ ಗೋಭಕ್ತರ ಮನಸ್ಸಿನಲ್ಲಿ ಆಗಿರುವ ಒಂದು ಕಳವಳಕಾರೀ ಸುದ್ದಿಯು ಸುಖಾಂತ್ಯ ಕಂಡು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಮೊದಲೊಮ್ಮೆ ಇದೇ ರೀತಿಯ ಘಟನೆಗೆ ಸಾಕ್ಷಿಯಾಗಿ ಮುರಳಿ ಮೊಗ್ರಾಲ್ ಅವರ ಮೂಲಕ ವಿಷಯಪ್ರಸ್ತಾವನೆಯಾಗಿ ರಕ್ಷಣೆಯಾಗಿ ಬಂದ ಶ್ರೀಗಳವರಿಂದ ನಾಮಕರಣಗೊಂಡ ಮಹದೇಶ್ವರ ಈಗ ಗೋಲಕದಲ್ಲಿ ವಿಹರಿಸುತ್ತಾ ಇದ್ದಾನೆ.