ಹಿಂದೂಧರ್ಮ
ಹಿಂದೂಗಳಲ್ಲಿ ದೇವರಿಗೂ ದೇವತೆಯಾಗಿರುವವಳು ಗೋಮಾತೆ. ’ಸರ್ವದೇವಮಯೀ’ ಪಟ್ಟವನ್ನೂ ಅಲಂಕರಿಸಿದ್ದಾಳೆ. ಬೆಳಗು ಪ್ರಾರಂಭವಾಗುವುದೇ ಗೋ ದರ್ಶನದಿಂದ. ಹಬ್ಬ-ಹರಿದಿನಗಳಲ್ಲೂ ಗೋವಿಗೆ ಮೊದಲ ಆದ್ಯತೆ. ಸಂಕ್ರಾಂತಿ, ದೀಪಾವಳಿಗಳು ಗೋವಿನದೇ ಹಬ್ಬಗಳು. ಪೂಜೆ, ಹೋಮ, ಹವನಾದಿಗಳ ವೇದಿಕೆಯ ಶುದ್ಧಿ, ಹವಿಸ್ಸು, ಪ್ರಸಾದಕ್ಕೆ ಗೋವಿನ ಉತ್ಪನ್ನಗಳಿಲ್ಲದೇ ಮುಂದಿನ ಮಾತಿಲ್ಲ. ಹೀಗೆ ಗೋವು ನಮ್ಮ ಬದುಕಿನ ಅಣುಅಣುವಿನಲ್ಲೂ ಸೂರೆಗೊಂಡಿದೆ.
ವೇದ, ಪುರಾಣಾದಿಗಳಲ್ಲಿ ಗೋವು
ಯಃ ಪೌರುಷೇಣ ಕ್ರವಿಷಾ ಸಮಂಕ್ತೇ ಯೋ ಅಶ್ವೇನ ಪಶುನಾ ಯಾತುಧಾನಃ |
ಯೇ ಅಘ್ನ್ಯಾ ಯೇ ಭರತಿ ಕ್ಷೀರಮಗ್ನೇ ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ ||
(ಋಕ್ ಸಂಹಿತೆ ೮೭-೧೬೧)
ಯಾವ ರಾಕ್ಷಸನು ಪುರುಷ ಸಂಬಂಧಿಯಾದ, ಮಾಂಸದಿಂದಲೂ, ಕುದುರೆಯೇ ಮೊದಲಾದ ಪ್ರಾಣಿಗಳ ಮಾಂಸದಿಂದಲೂ, ವಧಿಸಲ್ಪಡುವ ಗೋವಿನ ಮಾಂಸದಿಂದಲೂ ಹೊಟ್ಟೆ ತುಂಬಿಸಿಕೊಳ್ಳುವನೋ, ಗೋಕ್ಷೀರವನ್ನು ಅಪಹರಿಸುವನೋ ಇಂತಹವರ ತಲೆಗಳನ್ನು, ಹೇ! ಅಗ್ನಿದೇವ ನಿನ್ನ ಜ್ವಾಲೆಗಳಿಂದ ಸುಟ್ಟು ನಾಶಮಾಡು.
ಪ್ರಜಾಪತಿರ್ಮಹ್ಯಮೇತಾ ರರಾಣೋ ವಿಶ್ವೈರ್ದೇವೈಃ ಪಿತೃಭಿಃ ಸಂವಿದಾನಃ |
ಶಿವಾಃ ಸತೀರುಪ ನೋ ಗೋಷ್ಠಮಾಕಸ್ತಾಸಾಂ ವಯಂ ಪ್ರಜಯಾ ಸಂಸದೇಮ ||
(ಋಕ್ ಸಂಹಿತೆ ೧೦-೧೬೯-೪)
ಎಲ್ಲ ದೇವಪಿತೃಗಳಿಂದ ಕೂಡಿದ ಪ್ರಜಾಪತಿಯು ನಮ್ಮ ಸುಖಕ್ಕಾಗಿ ಮಂಗಲಕರವಾದ ಕೊಟ್ಟಿಗೆ, ಬೃಹತ್ತರವಾದ ಗೋಸ್ಥಾನ, ಗೋಶಾಲೆಯನ್ನು ನಿರ್ಮಿಸಿ, ಆ ಗೋವುಗಳ ಕರುಮರಿಯಿಂದ ನಾವು ಗೋಸಂಪತ್ತಿನಿಂದಾಗಿ ನಲಿಯುವಂತೆ ಮಾಡಲಿ. ಅವುಗಳ ಸೇವೆಯನ್ನು ಮಾಡಿ ಧನ್ಯರಾಗೋಣ.
ಸಾ ವಿಶ್ವಾಯುಃ ಸಾ ವಿಶ್ವಕರ್ಮಾ ಸಾ ವಿಶ್ವಧಾಯಾಃ |
(ಶುಕ್ಲ ಯಜುರ್ವೇದ ೧-೪)
ಆ ಗೋವು ಯಜ್ಞ ಸಂಬಂಧಿತವಾದ ಸಮಸ್ತ ಋಷಿಗಳಿಗೂ ಮತ್ತು ಯಜಮಾನನ ಆಯಸ್ಸನ್ನೂ ವೃದ್ಧಿಮಾಡುವಂತಹುದಾಗಿದೆ. ಗೋವು ಯಜ್ಞದ ಎಲ್ಲ ಕಾರ್ಯಗಳನ್ನು ನಡೆಸುವುದಾಗಿದೆ. ಹಾಲು ಇತ್ಯಾದಿ ಹವಿಃ ಪದಾರ್ಥಗಳನ್ನು ನೀಡುವ ಮೂಲಕ ಗೋವು ಯಜ್ಞದ ಸಮಸ್ತ ದೇವತೆಗಳನ್ನೂ ಪೋಷಿಸುವವಳಾಗಿದ್ದಾಳೆ.
ಆ ಗಾವೋ ಅಗ್ಮನ್ನುತ ಭದ್ರಮಕ್ರನ್ ಸೀದಂತು ಗೋಷ್ಠೇರಣಯಂತ್ವಸ್ಮೇ |
ಪ್ರಜಾವತೀಃ ಪುರುರೂಪಾ ಇಹಸ್ಸ್ಯುರಿಂದ್ರಾಯ ಪೂರ್ವೀರುಷಸೋದುಹಾನಾಃ ||
(ಅಥರ್ವಣವೇದ ೪-೨೧-೧೧)
ಯೂಯಂ ಗಾವೋ ಮೇ ದಯಥಾ ಕೃಶಂ ಚಿದಶ್ರೀರಂ ಚಿತ್ಕೃಣುಥಾ ಸುಪ್ರತೀಕಮ್ |
ಭದ್ರ ಗೃಹಂ ಕೃಣುಥ ಭದ್ರವಾಚೋ ಬೃಹದ್ವೋ ವಯ ಉಚ್ಯತೆ ಸಭಾಸು ||
(ಅಥರ್ವಣವೇದ ೪-೨೧-೬)
ಹೇ ಗೋವುಗಳೇ ನೀವು ನಿಮ್ಮ ಹಾಲು ತುಪ್ಪಗಳಿಂದ ದುರ್ಬಲ ಮನುಷ್ಯರನ್ನು ದಷ್ಟಪುಷ್ಟರನ್ನಾಗಿಯೂ, ನಿಸ್ತೇಜರನ್ನು ತೇಜಸ್ವಿಯನ್ನಾಗಿಯೂ ಮಾಡುತ್ತೀರಿ. ನೀವು ನಿಮ್ಮ ಮಂಗಲಮಯ ಶಬ್ದೋಚ್ಚಾರಣೆಯಿಂದ ನಮ್ಮ ಮನೆಗಳನ್ನು ಮಂಗಲಮಯವಾಗಿಸುತ್ತೀರಿ. ಇದರಿಂದ ಸಭೆಗಳಲ್ಲಿ ನಿಮ್ಮ ಕೀರ್ತಿಯ ವರ್ಣನೆ ನಡೆಯುತ್ತಿರುತ್ತದೆ.
ವಶಾಂ ದೇವಾ ಉಪಜೀವಂತಿ ವಶಾಂ ಮನುಷ್ಯಾ ಉಪ |
ವಶೇದಂ ಸರ್ವಂ ಭವತು ಯಾವತು ಸೂರ್ಯೋ ವಿಪಶ್ಶತಿ ||
(ಅಥರ್ವಣವೇದ ೧೦-೧೦-೩೪)
ಗೋವಿನಿಂದ ಪ್ರಾಪ್ತವಾದ ಗೋದುಗ್ಧ ಪದಾರ್ಥಗಳಿಂದ ದೇವಗಣ ಮತ್ತು ಮನುಷ್ಯಗಣ ಜೀವನ ನಡೆಸುತ್ತಿವೆ. ಎಲ್ಲಿಯವರೆಗೆ ಸೂರ್ಯದೇವನಿರುತ್ತಾನೋ ಅಲ್ಲಿಯವರೆಗೆ ಗೋವು ಇರುತ್ತದೆ. ಅಂದರೆ ಈ ಸಮಸ್ತ ಬ್ರಹ್ಮಾಂಡ ಗೋವಿನ ಆಧಾರದಿಂದಲೇ ಇದೆ.
ಸಾ ನೋ ಮಂದ್ರೇಷಮೂರ್ಜಂ ದುಹಾನಾ |
ಧೇನುರ್ವಾಗಸ್ಮಾನುಷ ಸುಷ್ಟುತೈತು ||
(ಛಂದಸ್ವತೀ ಸ್ಫೂರ್ತಿ)
ಇವಳು ಕಾಮಧೇನು. ಜಗದ ಜೀವರಾಶಿಯು ಅಪೇಕ್ಷಿಸಿದ ವಿಷಯಗಳನ್ನು ಕರೆಯುವ ದಿವ್ಯಧೇನು. ಇವಳ ಮೈ ಹಸುವಿನದು ; ಮುಖ ಹೆಣ್ಣಿನದು. ಸಮುದ್ರ ಮಥನದ ಕಾಲದಲ್ಲಿ ಅಮೃತಕ್ಕೆ ಮೊದಲಾಗಿ ಉದಯಿಸಿ ಬಂದ ತಾಯಿ. ಸರ್ವ ಮಂಗಲೆಯಾದ ಇವಳ ತುರುಬು ನಿತ್ಯ ಅರಳಿ ಪರಿಮಳಿಸುತ್ತಿರುತ್ತದೆ. ಇವಳ ದೃಷ್ಟಿ ಊಧಸ್ಸಿ (ಕೆಚ್ಚಲಿ)ನ ಮೇಲೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಪುರುಷಾರ್ಥಗಳನ್ನು ಇವಳು ಧಾರೆಯಾಗಿ ಸುರಿಸುತ್ತಾಳೆ. ಮುಂದಿನ ಉನ್ನತ ಸ್ತನ ಆತ್ಮಜ್ಞಾನದ ಊಟೆ. ಬೆನ್ನಿನ ಮೇಲಿರುವ ಇಣಿ ಶಂಕ. ಅಲ್ಲಿಯೇ ಪಕ್ಕದಲ್ಲಿ ಸೂರ್ಯ, ಚಂದ್ರ, ಅಗ್ನಿಗಳು ತ್ರೇತಾಗ್ನಿ ಸ್ವರೂಪರಾಗಿದ್ದಾರೆ. ದೇವತೆಗಳಿಂದ ಆರಂಭಿಸಿ ಎಲ್ಲ ವಿಧದ ಜೀವರೂ ಉಪಜೀವಿಸುವ ವಾಕ್ ಇವಳೇ. ಇವಳು ಮಂದ್ರವಾಗಿ ಸ್ತುತಿಸಲ್ಪಟ್ಟರೂ ಅನ್ನವನ್ನೂ ಬ್ರಹ್ಮವನ್ನೂ ಊಡುತ್ತಾಳಷ್ಟೆ ! ಇವಳು ನಮ್ಮ ಹತ್ತಿರವಿರಲಿ.
ಪೀತೋದಕಾ ಜಗ್ಧತೃಣಾ ದುಗ್ಧದೇಹಾ ನಿರಿಂದ್ರಿಯಾಃ |
ಆನಂದಾ ನಾಮ ತೇಲೋಕಸ್ತಾನ್ ಸ ಗಚ್ಛತಿ ತಾ ದದತ್ ||
(ಕಠೋಪನಿಷತ್)
ಆ ಹಸುಗಳು ನೀರು ಕುಡಿದು ಹುಲ್ಲು ತಿಂದು ಮುಗಿದಿದೆ. ಹಾಲು ಕರೆದಾಗಿದೆ. ಜನನ ಶಕ್ತಿ ತೀರಿದೆ. ಈ ಮುದಿ ಬರಡು ಹಸುಗಳನ್ನು ದಾನ ಮಾಡಿದವನು ಆನಂದರಹಿತವಾದ ಅಂಧಕಾರದ ಲೋಕಕ್ಕೆ ಹೋಗುತ್ತಾನೆ. ಅವುಗಳ ಬದಲು ನನ್ನನ್ನೇ ದಾನ ಮಾಡು (ವಾಜಶ್ರವಸ ಮುನಿಗೆ ವಿಶ್ವಜಿತ್ ಯಾಗದ ಸಂದರ್ಭದಲ್ಲಿ ನಚಿಕೇತ ಹೇಳಿದ್ದು).
ಗೋಕುಲಸ್ಯ ತೃಷಾರ್ತಸ್ಯ ಜಲಾರ್ಥೇ ವಸುಧಾಧಿಪಃ |
ಉತ್ಪಾದಯತಿ ಯೋ ವಿಘ್ನಂ ತಂ ವಿದ್ಯಾದ್ಬ್ರಹ್ಮಘಾತಿನಮ್ ||
(ಮಹಾಭಾರತ, ಅನುಶಾಸನ ಪರ್ವ ೨೪-೭)
ಬಾಯಾರಿಕೆಯಿಂದ ಸಂಕಟಪಡುತ್ತಿರುವ ಹಸುಗಳಿಗೆ ನೀರನ್ನೊದಗಿಸುವಲ್ಲಿ ಯಾವನು ವಿಘ್ನವನ್ನುಂಟುಮಾಡುತ್ತಾನೋ ಅಂತಹವನನ್ನು ಬ್ರಹ್ಮಹತ್ಯೆಗೆ ಸಮನಾದ ಪಾಪ ಮಾಡಿದವನೆಂದು ತಿಳಿಯಬೇಕು.
ಗವಾಂ ಮೂತ್ರಪುರೀಷಸ್ಯ ನೋದ್ವಿಜೇತ ಕಥಂಚನ |
ನ ಚಾಸಾಂ ಮಾಂಸಮಶ್ನೀಯಾದ್ಗವಾಂ ಪುಷ್ಟಿಂ ತಥಾಪ್ನುಯಾತ್ ||
(ಮಹಾಭಾರತ, ಅನುಶಾಸನ ಪರ್ವ ೭೮-೧೭)
ಗೋಮಯ-ಗೋಮೂತ್ರಗಳನ್ನು ನೋಡಿ ಯಾವುದೇ ಕಾರಣಕ್ಕೂ ಉದ್ವಿಗ್ನರಾಗಬಾರದು (ಸೇವಿಸಲು ಹೇಸಿಗೆಪಟ್ಟುಕೊಳ್ಳಬಾರದು). ಗೋಮೂತ್ರ-ಗೋಮಯಗಳು ಪರಮಪವಿತ್ರವಾದುದು. ಆದರೆ ಹಸುಗಳ ಮಾಂಸವನ್ನು ತಿನ್ನಲೇಬಾರದು. ಪಂಚಗವ್ಯ ಸೇವನೆಯಿಂದ ಮನುಷ್ಯನು ಪುಷ್ಟಿಯನ್ನು ಹೊಂದುತ್ತಾನೆ.
ಗಾವೋ ಮಮಾಗ್ರತೋ ನಿತ್ಯಂ ಗಾವಃ ಪೃಷ್ಠತ ಏವ ಚ |
ಗಾವೋ ಮೇ ಸರ್ವತಶ್ಚೈವ ಗವಾಂ ಮಧ್ಯೇ ವಸಾಮ್ಯಹಮ್ ||
(ಮಹಾಭಾರತ, ಅನುಶಾಸನ ಪರ್ವ ೮೦-೩)
ಗೋವುಗಳು ನಿತ್ಯವೂ ನನ್ನ ಮುಂಭಾಗದಲ್ಲಿರಲಿ. ಹಿಂಭಾಗದಲ್ಲಿಯೂ ಇರಲಿ. ನನ್ನ ಸುತ್ತಲೂ ಇರಲಿ. ಗೋವುಗಳ ಮಧ್ಯದಲ್ಲಿಯೇ ನಾನು ವಾಸ ಮಾಡುತ್ತೇನೆ.
ದಾನಾನಾಮಪಿ ಸರ್ವೇಷಾಂ ಗವಾಂ ದಾನಂ ಪ್ರಶಸ್ಯತೇ |
ಗಾವಃ ಶ್ರೇಷ್ಠಾಃ ಪವಿತ್ರಾಶ್ಚ ಪಾವನಂ ಹ್ಯೇತದುತ್ತಮಮ್ ||
(ಮಹಾಭಾರತ, ಅನುಶಾಸನ ಪರ್ವ ೮೩-೩)
ಎಲ್ಲ ವಿಧವಾದ ದಾನಗಳಿಗಿಂತಲೂ ಗೋವುಗಳ ದಾನವು ಪ್ರಶಸ್ತವಾದುದು. ಗೋದಾನವು ಉತ್ತಮೋತ್ತಮವಾದುದು. ಗೋವುಗಳು ಶ್ರೇಷ್ಠವಾದವುಗಳು, ಪವಿತ್ರವಾದವುಗಳು. ಪರಮಪಾವನವಾದವುಗಳೂ ಆಗಿವೆ.
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾದುಗ್ಧಂ ಗೀತಾಮೃತಃ ಮಹತ್ ||
(ಭಗವದ್ಗೀತಾ)
ಭಗವದ್ಗೀತೆಯು ಗೀತೋಪನಿಷತ್ತು, ಎಲ್ಲ ಉಪನಿಷತ್ತುಗಳ ಸಾರ. ಅದು ಗೋವಿನಂತಿದೆ. ಗೋಪಾಲನಂದನನೆಂದು ಪ್ರಸಿದ್ಧನಾಗಿರುವ ಶ್ರೀಕೃಷ್ಣನು ಈ ಹಸುವಿನ ಹಾಲನ್ನು ಕರೆಯುತ್ತಿದ್ದಾನೆ. ಅರ್ಜುನನು ಕರುವಿನಂತಿದ್ದಾನೆ. ಎಲ್ಲ ವಿದ್ವಾಂಸರು ಪರಿಶುದ್ಧ ಭಕ್ತರು. ಭಗವದ್ಗೀತೆಯ ಹಾಲಿನ ಅಮೃತವನ್ನು ಕುಡಿಯುತ್ತಾರೆ.
ಗೌರ್ಮೇ ಮಾತಾ ವೃಷಭಃ ಪಿತಾ ಮೇ ದಿವಂ ಶರ್ಮ ಜಗತೇ ಮೇ ಪ್ರತಿಷ್ಠಾ |
ಹಸುವು ನನ್ನ ತಾಯಿಯಾಗಿದೆ. ಗೂಳಿಯು ನನ್ನ ತಂದೆಯಾಗಿದೆ. ಗೋ ವೃಷಭಗಳೆರಡೂ ನನಗೆ ಸ್ವರ್ಗವನ್ನೂ, ಐಹಿಕ ಸುಖವನ್ನೂ ದಯಪಾಲಿಸಲಿ. ಹಸುವೇ ನನ್ನ ಜೀವಿಕೆಗೆ ಆಧಾರಭೂತವಾಗಿದೆ. ಹೀಗೆ ಹೇಳಿ ಗೋವನ್ನು ಶರಣು ಹೊಂದಬೇಕು.
ಗಾವೋ ಬಂಧುರ್ಮನುಷ್ಯಾಣಾಂ ಮನುಷ್ಯಾಬಾಂಧವಾ ಗವಾಮ್ |
ಗೌಃ ಯಸ್ಮಿನ್ ಗೃಹೇನಾಸ್ತಿ ತದ್ಬಂಧುರಹಿತಂ ಗೃಹಮ್ ||
(ಪದ್ಮಪುರಾಣ, ಸೃಷ್ಟಿ ೫೦-೧೫೫)
ದನಗಳು ಸದಾ ಲಕ್ಷ್ಮೀದೇವಿಯ ಮೂಲಸ್ಥಾನಗಳಾಗಿವೆ. ಗೋವುಗಳಲ್ಲಿ ಪಾಪದ ಲೇಶವೂ ಇರುವುದಿಲ್ಲ. ಧೇನು ಮತ್ತು ಮಾನವರಲ್ಲಿ ಪರಸ್ಪರ ಬಂಧುತ್ವದ ಸಂಬಂಧವಿದೆ. ಧೇನುಹೀನವಾದ ಮನೆಯು ಬಂಧುಶೂನ್ಯವೆನಿಸುತ್ತದೆ.
ವಾಗಿಂದ್ರಿಯಸ್ವರೂಪಾಯೈ ನಮಃ |
ವಾಚಾವೃತ್ತಿಪ್ರದಾಯಿನ್ನ್ಯೈ ನಮಃ ||
ಅಕಾರಾದಿಕ್ಷಕಾರಾಂತವೈಖರೀವಾಕ್ಸ್ವರೂಪಿಣ್ಯೈ ನಮಃ ||
ಗೋಸೇವೆ ಮತ್ತು ಗೋರಸ ಸೇವನೆಯಿಂದ ಪ್ರಜ್ಞಾಶಕ್ತಿ ಪ್ರಾಣಶಕ್ತಿಗಳೆರಡೂ ಉದ್ದೀಪನಗೊಳ್ಳುವವು. ಬ್ರಹ್ಮವಿದ್ಯಾ ಅಧಿಷ್ಠಾತ್ರಿಯಾದ ವಾಗ್ದೇವಿ, ಬ್ರಹ್ಮಾಣಿ, ಸರಸ್ವತಿಯು ಬುದ್ಧಿಯ ಅಧಿಷ್ಟಾತ್ರಿಯೂ ಹೌದು. ಗೋರಸ ಸೇವನೆಯಿಂದ ಉದ್ದೀಪನಗೊಂಡ ಪ್ರಾಣಶಕ್ತಿ ಪ್ರಜ್ಞಾಶಕ್ತಿಗಳು ವೃದ್ಧಿಯಾಗಿ ಸದ್ವಿಷಯಗಳಲ್ಲಿ ಪ್ರವೃತ್ತವಾಗುವವು. ಅರ್ಥಾತ್ ಸತ್ಪ್ರಧಾನವಾಗುವವು. ಬುದ್ಧ್ಯಾದಿ ಅಂತಃಕರಣ ಚತುಷ್ಟಯಗಳು ಇಂದ್ರಿಯಾದಿ ಬಾಹ್ಯಕರಣಗಳು ಎಂದರೆ ಏಕಾದಶೇಂದ್ರಿಯಗಳು ಶುದ್ಧಪರಬ್ರಹ್ಮ ಪ್ರಾಪ್ತಿಯಲ್ಲಿ ಉಪಯೋಗಿಸಲ್ಪಡುವವು. ಈ ದೃಷ್ಟಿಯಿಂದ ಗೋಶಬ್ದವು ವಾಗ್ದೇವಿ ಸರಸ್ವತಿಯ ಸಂಜ್ಞಾವಾಚಕವಾಗಿದೆ.
ಯನ್ನ ವೇದಧ್ವನಿಧ್ಯಾಂತಂ ನ ಚ ಗೋಭಿರಲಂಕೃತಮ್ |
ಯನ್ನಬಾಲೈಃ ಪರಿವೃತಂ ಶ್ಮಶಾನಮಿವ ತದ್ಗೃಹಮ್ ||
(ಅತ್ರಿಸಂಹಿತೆ ೩೧೦)
ಯಾವ ಮನೆಯಲ್ಲಿ ವೇದಧ್ವನಿ ಕೇಳಿ ಬರುವುದಿಲ್ಲವೋ, ಯಾವ ಮನೆಯಲ್ಲಿ ಗೋವು ಶೋಭಿಸುವುದಿಲ್ಲವೋ, ಯಾವ ಮನೆಯಲ್ಲಿ ಮಕ್ಕಳು ಇರುವುದಿಲ್ಲವೋ ಆ ಮನೆ ಸ್ಮಶಾನಕ್ಕೆ ಸಮಾನವಾದುದು.
ಗೋಮೂತ್ರಗೋಮಯಂ ಸರ್ಪಿಃ ಕ್ಷೀರಂ ದಧಿ ಚ ರೋಚನಾ |
ಷಡಂಗಮೇತತ್ ಪರಮಂ ಮಾಂಗಲ್ಯಂ ಸರ್ವದಾ ಗವಾಮ್ ||
(ವಿಷ್ಣುಸ್ಮೃತಿ)
ಗೋಮೂತ್ರ, ಗೋಮಯ, ಹಾಲು, ತುಪ್ಪ, ಮೊಸರು ಮತ್ತು ಗೋರೋಚನ ಇವು ಆರು ಪದಾರ್ಥಗಳೂ ಅತ್ಯಂತ ಮಂಗಲಕಾರಿಯಾಗಿವೆ.
ಸರ್ವದೇವಮಯೀ ಗೋವು
ಗೋವಿನ ಅಣುಅಣುವೂ ದೇವತೆಗಳ ಆವಾಸ. ಒಂದಲ್ಲ, ಎರಡಲ್ಲ ಬರೋಬ್ಬರಿ ೩೩ ಕೋಟಿ ದೇವತೆಗಳ ವಾಸ. ಅಷ್ಟೇ ಅಲ್ಲದೇ, ಗವಾಂ ಅಂಗೇಷು ತಿಷ್ಠಂತಿ ಭುವನಾನಿ ಚತುರ್ದಶ – ಗೋವಿನ ಅಂಗಾಂಗಗಳಲ್ಲಿ ೧೪ ಲೋಕಗಳೂ ನೆಲೆಸಿವೆ ಎಂದು ಸ್ಮೃತಿ ಹೇಳುತ್ತದೆ.
ಗೋವಿನ ಸರ್ವದೇವಮಯೀ ಸ್ವರೂಪದ ಕಿರು ಪರಿಚಯ :
- ಎರಡೂ ಕೋಡಿನ ಮೂಲದಲ್ಲಿ ಬ್ರಹ್ಮ-ವಿಷ್ಣು
- ಕೋಡುಗಳ ತುದಿಯಲ್ಲಿ ಎಲ್ಲ ತೀರ್ಥಗಳು, ವೇದವ್ಯಾಸರು
- ತಲೆಯ ಮಧ್ಯದಲ್ಲಿ ಮಹಾದೇವ ಶಂಕರ
- ಹಣೆಯ ತುದಿಯಲ್ಲಿ ಪಾರ್ವತಿ
- ಮೂಗಿನಲ್ಲಿ ಷಣ್ಮುಖ ಕಾರ್ತಿಕೇಯ, ಮೂಗಿನ ಹೊಳ್ಳೆಯಲ್ಲಿ ಕಂಬಲ ಹಾಗೂ ಅಶ್ವತರ ದೇವತೆಗಳು
- ಎರಡೂ ಕಿವಿಗಳಲ್ಲಿ ಅಶ್ವಿನಿ ಕುಮಾರರು
- ಕಣ್ಣುಗಳೆರಡರಲ್ಲಿ ಸೂರ್ಯಚಂದ್ರರು
- ದಂತಪಂಕ್ತಿಯಲ್ಲಿ ಪ್ರಾಣಾಪಾನಾದಿ ವಾಯುಗಳು, ನಾಲಗೆಯಲ್ಲಿ ವರುಣ
- ಹೂಂಕಾರದಲ್ಲಿ ಸರಸ್ವತಿ
- ಗಂಡಸ್ಥಳದಲ್ಲಿ ಮಾಸ-ಪಕ್ಷ ದೇವತೆಗಳು
- ತುಟಿಯಲ್ಲಿ ಸಂಧ್ಯಾ ದೇವತೆಯರು, ಕುತ್ತಿಗೆಯಲ್ಲಿ ಇಂದ್ರ
- ಗಂಗೆದೊಗಲಿನಲ್ಲಿ ರಕ್ಷೆಗಣಗಳು
- ಹೃದಯಯದಲ್ಲಿ ಸಾಧ್ಯದೇವಗಣಗಳು
- ತೊಡೆಯಲ್ಲಿ ಧರ್ಮ ದೇವತೆ
- ಗೊರಸಿನ ಮಧ್ಯದಲ್ಲಿ ಗಾಂಧರ್ವರು, ತುದಿಯಲ್ಲಿ ಪನ್ನಗ (ಸರ್ಪ) ದೇವತೆಗಳು, ಪಾರ್ಶ್ವದಲ್ಲಿ ಅಪ್ಸರೆಯರು
- ಬೆನ್ನಿನಲ್ಲಿ ಏಕಾದಶ ರುದ್ರರು, ಯಮರಾಜ, ಸಂಧಿಗಳಲ್ಲಿ ಅಷ್ಟವಸುಗಳು
- ನಾಭಿಯ ಅಕ್ಕಪಕ್ಕದಲ್ಲಿ ಪಿತೃ ದೇವತೆಗಳು, ಹೊಟ್ಟೆಯ ಭಾಗದಲ್ಲಿ ದ್ವಾದಶ ಆದಿತ್ಯರು
- ಬಾಲದಲ್ಲಿ ಸೋಮ, ಕೂದಲಿನಲ್ಲಿ ಸೂರ್ಯಕಿರಣ, ಗೋಮೂತ್ರದಲ್ಲಿ ಗಂಗೆ, ಗೋಮಯದಲ್ಲಿ ಲಕ್ಷ್ಮೀ-ಯಮುನೆ, ಹಾಲಿನಲ್ಲಿ ಸರಸ್ವತಿ, ಮೊಸರಿನಲ್ಲಿ ನರ್ಮದೆ, ತುಪ್ಪದಲ್ಲಿ ಅಗ್ನಿ
- ರೋಮಗಳಲ್ಲಿ ೩೩ ಕೋಟಿ ದೇವತೆಗಳು
- ಉದರದಲ್ಲಿ ಪೃಥ್ವೀ, ಕೆಚ್ಚಲಿನಲ್ಲಿ ನಾಲ್ಕು ಸಾಗರಗಳು, ಶರೀರಪೂರ್ತಿ ಕಾಮಧೇನು
- ಹುಬ್ಬಿನ ಮೂಲದಲ್ಲಿ ಮೂರು ಗುಣಗಳು, ರೋಮ ರಂಧ್ರಗಳಲ್ಲಿ ಋಷಿಗಳು, ಅಪಾನ ವಾಯುವಿನಲ್ಲಿ ಸಮಸ್ತ ತೀರ್ಥಗಳು
- ತುಟಿಗಳಲ್ಲಿ ಚಂಡಿಕೆ, ಚರ್ಮದಲ್ಲಿ ಪ್ರಜಾಪತಿ ಬ್ರಹ್ಮ
- ನಾಸಿಕಾ ರಂಧ್ರದಲ್ಲಿ ಸುಗಂಧಿತ ಪುಷ್ಪಗಳು
- ಕಂಕುಳಲ್ಲಿ ಸಾಧ್ಯ ದೇವತೆಗಳು
- ಮುಖದಲ್ಲಿ ವೇದಗಳ ಷಡಂಗಗಳು, ಪಾದಗಳಲ್ಲಿ ನಾಲ್ಕು ವೇದಗಳು, ಗೊರಸಿನ ಮೇಲ್ಭಾಗದಲ್ಲಿ ಯಮರಾಜ, ಬಲದಲ್ಲಿ ಕುಬೇರ ಹಾಗೂ ಗರುಡ, ಎಡದಲ್ಲಿ ತೇಜಸ್ವಿ ಹಾಗೂ ಶಕ್ತಿಸಂಪನ್ನ ಯಕ್ಷರು, ಒಳ ಭಾಗದಲ್ಲಿ ಗಂಧರ್ವರು
- ಪಾದಗಳ ಮುಂಭಾಗದಲ್ಲಿ ಸಿದ್ಧಾದಿ ಖೇಚರರು, ಕರುಳಿನಲ್ಲಿ ಶ್ರೀಮನ್ನಾರಾಯಣ, ಅಸ್ಥಿಗಳಲ್ಲಿ ಪರ್ವತಗಳು, ಪಾದಗಳಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ
- ಹುಂಕಾರದಲ್ಲಿ ನಾಲ್ಕು ವೇದಗಳು, ಪೃಷ್ಠಭಾಗದಲ್ಲಿ ಸುಮೇರು ಪರ್ವತ
ಜೈನಧರ್ಮ
ಜೈನಧರ್ಮ ಗೋ ಸಂರಕ್ಷಣೆಯ ನಿಟ್ಟಿನಲ್ಲಿ…
- ಜೈನಧರ್ಮದ ಮಾರ್ಗ ಸ್ವಭಾವ ಸಹಜವಾಗಿಯೇ ಅಹಿಂಸೆ. ಹಾಗಾಗಿ ಗೋವುಗಳೇನು, ಉಳಿದ ಪಶು-ಪಕ್ಷಿಗಳನ್ನೂ ಹಿಂಸಿಸುವ ನಡೆ ಅವರಿಗೆ ಬೇಕಿಲ್ಲ.
- ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಅದು. ಜೈನ ಶ್ರಾವಕರು ಗೋ ಸಂರಕ್ಷಣೆಯಲ್ಲಿ ಸಕ್ರಿಯರಾಗಿದ್ದರು. ಸಾಮಾನ್ಯವಾಗಿ ಕೃಷಿಯಲ್ಲಿ ತೊಡಗಿರುತ್ತಿದ್ದ ಶ್ರಾವಕರಿಗೆ ದೊಡ್ಡ ಪ್ರಮಾಣದಲ್ಲಿ ಎತ್ತುಗಳು ಬೇಕಾಗಿದ್ದುದರಿಂದ ಬೃಹತ್ ಗೋಶಾಲೆಗಳನ್ನು ಕಟ್ಟಿ-ಬೆಳೆಸುತ್ತಿದ್ದರು. ಗೋಪಾಲನೆ ಜೀವನದ ಅಂಗವೇ ಆಗಿತ್ತು. ಹಾಗೆಂದು ಗೋವುಗಳಿಗೆ ಹಿಂಸೆ ಕೊಡುವುದು, ಅತಿಭಾರ ಹೇರುವುದು, ಕಡಿಮೆ ಆಹಾರ ನೀಡುವುದು, ಕ್ರೂರವಾಗಿ ಬಂಧಿಸುವುದು, ಅವುಗಳ ಅಂಗಗಳಿಗೆ ಭಂಗ ತರುವುದು ಇವನ್ನೆಲ್ಲ ನಿಷೇಧಿಸಲಾಗಿತ್ತು.
- ಮತ್ತೆ, ಶ್ರೀಮಂತಿಕೆಯ ತೀರ್ಮಾನವಾಗುವಾಗ ಗೋಸಂಪತ್ತಿನ ಸಮೃದ್ಧಿ ಮಾನದಂಡವಾಗುತ್ತಲಿತ್ತು. ಒಂದು ವ್ರಜ / ಗೋಕುಲ = ೧೦,೦೦೦ ಗೋವುಗಳು. ಅತಿಹೆಚ್ಚು ಗೋಕುಲಗಳನ್ನು ಹೊಂದಿದ್ದ ೧೦ ಮಂದಿಯನ್ನು ’ರಾಜಗೃಹರ ಮಹಾಶತಕ’ ಹಾಗೂ ’ಕಾಶಿಯಚೂಲನಿಪಿತಾ’ ಎಂದೂ ಕರೆಯಲಾಗುತ್ತಿತ್ತು.
- ಮಹಾವೀರರು ತಮ್ಮ ಶಿಷ್ಯರಿಗೆ ೬೦,೦೦೦ ಗೋವುಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂಬ ಆದೇಶ ಮಾಡಿದ್ದರು.
- ಆನಂದನು ಮಹಾವೀರರಲ್ಲಿ ಶ್ರಾವಕ ದೀಕ್ಷೆಯನ್ನು ಪಡೆಯುವಾಗ ೮ ಗೋಕುಲಗಳನ್ನು ನಡೆಸುವ ಶಪಥ ಮಾಡುತ್ತಾನೆ.
ಬೌದ್ಧಧರ್ಮ
ಗೋಪಾಲನೆಯ ಕುರಿತಾಗಿ ಬೌದ್ಧಧರ್ಮ
- ಜನತೆಗೆ ಗೋವಂಶದ ಉಪಯೋಗ, ಮಹತ್ತ್ವಗಳನ್ನು ಹೇಳುತ್ತ, ಗೋವಧೆ ಮಾಡಬಾರದೆಂದು ತಿಳಿಹೇಳುತ್ತಿದ್ದನು ಹಾಗೂ ಗೋಪಾಲನೆಗೆ ಸರ್ವೋಚ್ಚ ಸ್ಥಾನವನ್ನು ನೀಡಿದ್ದನು.
- ಯಥಾ ಮಾತಾ ಸಿತಾ ಭ್ರಾತಾ ಅಜ್ಞೇ ವಾಪಿ ಚ ಜ್ಞಾತಕಾ |
ಗಾವೋ ಮೇ ಪರಮಾ ಮಿತ್ತಾ ಯಾತು ಜಜಾಯಂತಿ ಔಷಧಾ ||
ಅನ್ನದಾ ಬಲದಾ ಚೇತಾ ವಣ್ಣದಾ ಸುಖದಾ ತಥಾ |
ಎತಮತ್ಥವಸಂ ಜ್ಞತ್ವಾ ನಾಸ್ಸುಗಾವೋ ಹನಿಂ ಸುತೆ ||
(ಗೌತಮ ಬುದ್ಧ)
ಯಾವ ರೀತಿ ತಾಯಿ, ತಂದೆ, ಸಹೋದರರು, ಕುಟುಂಬ, ಪರಿವಾರದ ಸದಸ್ಯರು ಇರುತ್ತಾರೋ ಅದೇ ರೀತಿ ಗೋವುಗಳು ಕೂಡ ನಮ್ಮ ಪರಮ ಮಿತ್ರರು, ಪರಮ ಹಿತಕಾರಿಯಾಗಿವೆ. ಅದರ ಹಾಲಿನಿಂದ ಔಷಧಿ ತಯಾರು ಮಾಡುತ್ತಾರೆ. ಗೋವು ಅನ್ನ, ಬಲ, ರೂಪ, ಸೌಂದರ್ಯ ಮತ್ತು ಸುಖ ನೀಡುವಂತಹದ್ದಾಗಿದೆ. ಇದೇ ರೀತಿ ಎತ್ತು ಎಲ್ಲ ಗೃಹಸ್ಥರಿಗೂ ಪೋಷಣದಾಯಿಯಾಗಿದೆ. ಹಾಗಾಗಿಯೇ ಗೋವು-ಎತ್ತುಗಳನ್ನು ಮಾತಾಪಿತೃಗಳಂತೆ ಆದರದಿಂದ ಕಾಣಬೇಕು.
- ಗೋಣಾಹಿ ಸಖ್ಯ ಗಿಹೀನಂ ಪೋಸಕಾ ಭೋಗರಾಯಕಾ |
ತಸ್ಮಾ ಹಿ ಮಾತಾ ಪಿತಾ ವ ಮಾನಯೆ ಸಕ್ಕರೇಯ್ಯ ಚ || ೧೪ ||
ಯೆ ಚ ಖಾದಂತಿ ಗೋಮಾಂಸಂ ಮಾತುಮಾಂಸಂ ವ ಖಾದಯೆ || ೧೫ ||
(ಲೋಕನೀತಿ ೭)
ಎಲ್ಲ ಗೃಹಸ್ಥರಿಗೂ ಯೋಗ್ಯ ಪದಾರ್ಥಗಳು ಮತ್ತು ಆವಶ್ಯಕ ವಸ್ತುಗಳನ್ನು ನೀಡಿ ಸಲಹುವವು ಗೋವು, ಎತ್ತುಗಳೇ ಆಗಿವೆ. ಆದ್ದರಿಂದ ಮಾತಾಪಿತೃಗಳಂತೆ ಅವುಗಳನ್ನು ಪೂಜ್ಯತೆಯಿಂದ, ಆದರದಿಂದ ಕಾಣಬೇಕು. ಯಾರು ಗೋಮಾಂಸ ತಿನ್ನುತ್ತಾರೋ ಅವರು ತನ್ನ ತಾಯಿ ಮಾಂಸವನ್ನೇ ತಿಂದಂತೆ.
- ವೈಭವಶೀಲ ಭಾರತವಾಗಬೇಕಾದರೆ ಇಲ್ಲಿ ಗೋವುಗಳ ಉನ್ನತಿ ಆಗಲೇಬೇಕು – ಸಾಮ್ರಾಟ್ ಅಶೋಕ
ಸಿಖ್‌ಧರ್ಮ
ಗೋ ಸಂರಕ್ಷಣೆಗೆ ಸಿಖ್ಖರು ಮಿಡಿದದ್ದು ಹೀಗೆ
- ಖಾಲ್ಸಾ ಪಂಥವನ್ನು ಅರ್ಥ, ಧರ್ಮ, ಗೋವು, ಬ್ರಾಹ್ಮಣ, ದೀನ-ದುಃಖಿಗಳ ರಕ್ಷಣೆಗಾಗಿ ಸ್ಥಾಪಿಸಲಾಗಿದೆ ಎಂದು ೧೦ನೇ ಗುರು ಗೋವಿಂದಸಿಂಗರು ಪಂಡಿತ ಪೃಥ್ವೀರಾಜರಿಗೆ ಸ್ಪಷ್ಟಪಡಿಸುತ್ತಾರೆ.
- ಗುರು ಗೋವಿಂದಸಿಂಗರ ಮೊದಲ ಗುರುಗಳಿಗೆ ಕೇವಲ ಗೋಹತ್ಯೆ ಮಾತ್ರವಲ್ಲ, ಪ್ರಾಣಿ ಹತ್ಯೆಯ ಬಗೆಗೂ ಸಂಪೂರ್ಣ ವಿರೋಧವಿತ್ತು.
- ಪಂಜಾಬದಲ್ಲಿ ಸ್ಥಾಪಿಸಲಾಗಿದ್ದ ಕಸಾಯಿಖಾನೆಗಳನ್ನು ಮುಚ್ಚಿಸಲು ೧೮೭೧ರಲ್ಲಿ ಗುರುರಾಮಸಿಂಹರ ನೇತೃತ್ವದಲ್ಲಿ ೩,೧೫,೦೦೦ ಕುಕಾವೀರರು (ನಾಮಧಾರಿ ಸಿಖ್ಖರು) ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ.
ಉಳಿದ ಧರ್ಮಗಳ ಕಾಳಜಿ
ಗೋವಿನ ಬಗೆಗೆ ಜಗನ್ಮಾನ್ಯ ಮತ-ಧರ್ಮಗಳ ಕಾಳಜಿ
- ವೃಷಭವನ್ನು ದೇವತೆ ಎಂದು ಕೊಂಡಾಡಿದೆ.
- ಯಹೂದಿಗಳು ಗೋವನ್ನು ಅತ್ಯಂತ ಆದರಿಸುತ್ತಿದ್ದರಲ್ಲದೇ, ನಿಪುಣ ಗೋಪಾಲಕರೂ ಆಗಿದ್ದರು.
- ಹಸುವನ್ನು ಗೌರವದಿಂದ ಕಾಣಿರಿ. ಏಕೆಂದರೆ ಚತುಷ್ಪಾದೀ ಪ್ರಾಣಿಗಳಲ್ಲಿ ಅದು ಸರ್ವಶ್ರೇಷ್ಠವಾದುದು (ದರಮನ್ಸೂರ್ ಗ್ರಂಥ – ಹಜರತ್ ಮೊಹಮ್ಮದ್)
- ಹಸುವಿನ ಹಾಲು ಸಮಸ್ತ ರೋಗಗಳಿಗೂ ಪರಮೌಷಧ. ಅದರಿಂದ ಸಿಗುವ ಬೆಣ್ಣೆ ರೋಗ ನಿವಾರಕ ಹಾಗೂ ಮಾಂಸ ರೋಗವರ್ಧಕ. (ಹಜರತ್ ಆಯೇಷಾ, ಉಲ್ಲಾ ಜಲಾಲುದ್ದೀನ್ ಸೇವತಿ)
- ಹಸುವಿನ ಹಾಲು ಪೂರ್ಣತಃ ರೋಗ ನಿವಾರಕ (ಇನ್ನಮಸೂರ ಸಹಾವೀ ರಸೂಲ್)
- ಹಸುವಿನ ಮಾಂಸ ರೋಗವರ್ಧಕ, ಅದರ ಬೆಣ್ಣೆ ಔಷಧಿ ಹಾಗೂ ಅದರ ಹಾಲು ರೋಗವನ್ನು ವಿಮುಕ್ತಗೊಳಿಸುವ ಶಕ್ತಿಯುಳ್ಳದ್ದು. (ಉಲ್ಲಾಸ ತಿವರೀ ಜಹೀರ್)
- ಅಬ್ದುಲ್ ಮುಲ್ಕ ಇವನ್‌ಮದ್ದಾನಾ ಸುಬೇದಾರ್ ಇರಾನ್‌ನಲ್ಲಿ, ಹಿಜಾಜ್ ಬಿನ್ ಯೂಸೆಫ್‌ರವರು ತಮ್ಮ ಪ್ರಾಂತ್ಯದ ಸರಹದ್ದಿನಲ್ಲೂ ಗೋವಧೆಯನ್ನು ನಿಲ್ಲಿಸಿದ್ದರು.
- ಅಫ್ಘಾನಿಸ್ಥಾನದಲ್ಲಿ ಶಾಸನಾಧಿಕಾರಿಗಳಾದ ೧೧೦ನೇ ಅಹಲ್ ಸುನ್ನತ್‌ನ ಫತ್ವಾ (ಧಾರ್ಮಿಕ ಆಜ್ಞೆ) ಪ್ರಕಾರ ಗೋವಧೆಯನ್ನು ನಿಷೇಧಿಸಲಾಗಿತ್ತು.
- ಜಾರತುಷ್ಟ್ರ – ಪಾರಸೀ ಗುರು – ಭಗವಂತನು ಮನುಷ್ಯ ಜಾತಿಗೆ ಅಭ್ಯುದಯ ಮತ್ತು ಗೋವುಗಳ ಹಿತ ಸಾಧಿಸಲು ಅವಶ್ಯಕ ಬುದ್ದಿ, ಸದಾಚಾರ ಮತ್ತು ದೃಢತೆಯನ್ನು ನೀಡುವಂತೆ ಕೇಳಿಕೊಳ್ಳುತ್ತಾನೆ. (ಯಶನ ೪೫೧೨)
- ಇಂಡೋನೇಷ್ಯಾದ ರಾಜಧಾನಿ ಬಾಲಿ ದ್ವೀಪದಲ್ಲಿ ಮರಣಾನಂತರ ಶವವನ್ನು ಕಾಗದದ ಗೋವಿನ ಪ್ರತಿಕೃತಿಯೊಳಗೆ ಇಟ್ಟು ಸುಡುತ್ತಿದ್ದರು. ಇದರಿಂದ ಮೃತಪಟ್ಟ ವ್ಯಕ್ತಿ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ ಎನ್ನುವ ಭಾವನೆ ಇತ್ತು.
- ಥೈಲ್ಯಾಂಡಿನ ಅನೇಕ ಬೌದ್ಧ ಮಂದಿರಗಳಲ್ಲಿ ಗೋವಿನ ಪ್ರತಿಮೆಗಳನ್ನು ಈಗಲೂ ನೋಡಬಹುದು. ಬ್ಯಾಂಕಾಕ್‌ನಲ್ಲಿರುವ ಜಗತ್ಪ್ರಸಿದ್ಧ ಬೌದ್ಧಾಲಯದಲ್ಲಿ ಎಲ್ಲರ ಗಮನ ಸೆಳೆಯುವ ಜಾಗದಲ್ಲಿ ಗೋವಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
- ಫಿಲಿಫೈನ್ಸ್‌ನಲ್ಲಿ ಉತ್ಖನನ ನಡೆಸಿದಾಗ ಗೋವಿನ ಮೂರ್ತಿಗಳು ಸಿಕ್ಕಿವೆ.
- ಈಜಿಪ್ಟಿನ ಪ್ರಾಚೀನ ಪಿರಮಿಡ್ಡುಗಳಲ್ಲಿ ಗೋವಿನ ಚಿತ್ರವನ್ನು ಕೆತ್ತಲಾಗಿದೆ.