ಗೋಸಂರಕ್ಷಣೆಗೆ ವೈಜ್ಞಾನಿಕ ಪರಿಭಾಷೆ ಅಗತ್ಯ: ರಾಘವೇಶ್ವರ ಶ್ರೀ

ಹೊನ್ನಾವರ: ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಇಂದು ಭಾರತದಲ್ಲಿ ಧರ್ಮಶಾಸ್ತ್ರ, ಪ್ರಾಚೀನ ಗ್ರಂಥಗಳ ಅಗತ್ಯ ಎಷ್ಟಿದೆಯೋ ವೈಜ್ಞಾನಿಕ ಪರಿಭಾಷೆಯ ಅಗತ್ಯವೂ ಅಷ್ಟೇ ಇದೆ ಎಂದು ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಪ್ರತಿಪಾದಿಸಿದರು.

ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ- ಕರ್ನಾಟಕ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಗರದ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಲೆನಾಡು ಗಿಡ್ಡ ಹಬ್ಬ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಇಂದಿನ ಪೀಳಿಗೆಗೆ ವೈಜ್ಞಾನಿಕ ಭಾಷೆಯಲ್ಲಿ ಹೇಳಿದರಷ್ಟೇ ಅರ್ಥವಾಗುತ್ತದೆ. ಆದ್ದರಿಂದ ದೇಶಿ ತಳಿಗಳ ಮಹತ್ವ ವಿವರಿಸುವಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದು. ಮಲೆನಾಡು ಗಿಡ್ಡದಂಥ ಅಪೂರ್ವ ತಳಿಗಳ ಮಹತಿಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಲೆನಾಡು ಗಿಡ್ಡ ಹಬ್ಬದಂಥ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ ಎಂದು ಬಣ್ಣಿಸಿದರು.

ಮನೆಯಲ್ಲಿ ಶೋಕಿಗಾಗಿ ನಾಯಿ ಸಾಕುವುದಕ್ಕಿಂತ ಮಲೆನಾಡು ಗಿಡ್ಡದಂಥ ತಳಿಗಳನ್ನು ಮನೆಯಲ್ಲೇ ಬೆಳೆಸಿದರೂ ಸಾಕಷ್ಟು ಪ್ರಯೋಜನವಿದೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು; ಗೋವುಗಳನ್ನು ನಿಸ್ವಾರ್ಥವಾಗಿ ಸಾಕುವವರನ್ನು ಸಮಾಜ ಗುರುತಿಸಿ, ಗೌರವಿಸಬೇಕಿದೆ ಎಂದರು.

ಗೋವುಗಳನ್ನು ಸಾಗಾಣಿಕೆ ಮಾಡುವಲ್ಲಿ ಇಂದು ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಪ್ರಯಾಣದ ಸುಧೀರ್ಘ ಅವಧಿಯಲ್ಲಿ ಮೇವು, ನೀರು, ಗಾಯದ ಸಮಸ್ಯೆಯಂಥ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಗೋಸ್ವರ್ಗ ವಿಶೇಷ ವಾಹನ ಅಭಿವೃದ್ಧಿಪಡಿಸುತ್ತಿದೆ. ಅಂತೆಯೇ ಗೋವುಗಳಿಗೆ ಸಾಗಾಣಿಕೆಯಲ್ಲಿ ತೊಂದರೆಯಾಗದಂತೆ ಪ್ರತ್ಯೇಕ ಕಂಪಾರ್ಟ್ಮೆಂಟ್ಗಳನ್ನು ನಿರ್ಮಿಸಿ, ಅದರಲ್ಲಿ ಮೇವು- ನೀರಿನ ಲಭ್ಯತೆ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಇಂದು ಗೋಸಾಕಾಣಿಕೆಯನ್ನು ಎಷ್ಟೋ ಮಂದಿ ತ್ಯಜಿಸಿ, ಗೋವುಗಳನ್ನು ಗೋಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಇದು ಸಲ್ಲದು. ನಮ್ಮ ಅಪೂರ್ವ ತಳಿಗಳ ಮಹತ್ವ ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ಮಾಡಿದರು.

ಗೋವುಗಳು ರೈತರ ಜತೆಗೆ, ಸಮಾಜದ ಜತೆಗೆ ಇದ್ದರಷ್ಟೇ ಸಮಾಜಕ್ಕೆ ಹಿತವಾಗುತ್ತದೆ. ಯಾವುದೋ ಸಂಘ ಸಂಸ್ಥೆ, ಮಠ ಮಾನ್ಯಗಳು ಇವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರೂ ಅದರ ಪ್ರಯೋಜನ ಸೀಮಿತವಾಗುತ್ತದೆ ಎಂದು ನುಡಿದರು.

ನಮ್ಮ ಸುತ್ತಲಿನ ಪರಿಸರ, ಗೋ ತಳಿಗಳನ್ನು ತಿಳಿದುಕೊಳ್ಳುವುದೇ ಆತ್ಮಜ್ಞಾನ. ಗೋಸಂಕುಲದಲ್ಲಿ ಭಾರತೀಯ ತಳಿಗಳು ಶ್ರೇಷ್ಠ. ಅದರಲ್ಲೂ ಮಲೆನಾಡು ಗಿಡ್ಡ ಸರ್ವಶ್ರೇಷ್ಠ. ನಮ್ಮ ಊರು, ದೇಶ, ಗಿಡಮರ, ಗೋವುಗಳ ಬಗ್ಗೆ ತಿಳಿವಳಿಕೆ ಅಗತ್ಯ. ಇದು ಎಷ್ಟೋ ಕೆಡುಕುಗಳನ್ನು ನಿವಾರಿಸಬಲ್ಲದು ಎಂದು ಹೇಳಿದರು. ಇದು ವಿಜ್ಞಾನದ ಜತೆಗೆ ಆಧ್ಯಾತ್ಮ ಕೂಡಾ ಹೌದು. ಗೋವಿನಲ್ಲಿ ನಮ್ಮ ಊಹೆಗೂ ನಿಲುಕದ ಹಲವು ಅಂಶಗಳಿವೆ. ಇವು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ವೈಜ್ಞಾನಿಕ ಅಂಶಗಳನ್ನು ತಿಳಿದುಕೊಂಡರೂ ನಾವು ಗೋವುಗಳನ್ನು ಪೂಜಿಸಲು ಆರಂಭಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.

ಎನ್ಡಿಆರ್ಐ ದಕ್ಷಿಣ ವಿಭಾಗ ನಿರ್ದೇಶಕ ಡಾ.ಕೆ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಗೋ ಪರಿವಾರ- ಕರ್ನಾಟಕದ ಖಜಾಂಚಿ ಮುರಳೀಧರ ಪ್ರಭು ಅವಲೋಕನ ನಡೆಸಿದರು. ಡಾ.ಎಂ.ಪಿ.ಕರ್ಕಿ, ಮಂಜುನಾಥ ಭಟ್ ಸುವರ್ಣಗದ್ದೆ, ರಾಜು ಹೆಬ್ಬಾರ್, ಡಾ.ವಿಶ್ವನಾಥ್ ವಿ.ಭಟ್, ತಾಲೂಕು ಗೋ ಪರಿವಾರದ ಅಧ್ಯಕ್ಷ ಯೋಗೀಶ್ ರಾಯ್ಕರ್ ಉಪಸ್ಥಿತರಿದ್ದರು.

ಗೋಸೇವೆಯಲ್ಲಿ ನಿರತರಾದ ವಿನಾಯಕ ಭಟ್ ಕಾನ್ಸೂರು, ಸುಬ್ರಾಯ ಪರಮೇಶ್ವರ ಶೆಟ್ಟಿ, ಸತೀಶ್ ಗೌಡ ಮುಲ್ಲೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಹಾಲು ಕೊಡುವ ಹಸು ಸಾಕಿದವರಿಗೆ ಬಹುಮಾನ ವಿತರಿಸಲಾಯಿತು.

ಹೊನ್ನಾವರ: ಅಪೂರ್ವ ಮಲೆನಾಡು ಗಿಡ್ಡ ಹಬ್ಬದಲ್ಲಿ ಜನಸಾಗರ
ಮಲೆನಾಡು ಗಿಡ್ಡ ಅತ್ಯಪೂರ್ವ ತಳಿ: ಡಾ.ಕೆ.ಪಿ.ರಮೇಶ್
ಹೊನ್ನಾವರ: ವಿಶ್ವದಲ್ಲೇ ಅತ್ಯಂತ ವಿಶಿಷ್ಟ ಗೋ ತಳಿ ಎನಿಸಿದ ಮಲೆನಾಡು ಗಿಡ್ಡದಂಥ ತಳಿಗಳನ್ನು ಉಳಿಸಿ ಬೆಳೆಸುವುದು ಅಗತ್ಯ. ಇದು ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತಿದೊಡ್ಡ ಕೊಡುಗೆ ಎಂದು ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ (ಎನ್ಡಿಆರ್ಐ)ಯ ದಕ್ಷಿಣ ಭಾರತ ಕೇಂದ್ರದ ನಿರ್ದೇಶಕ ಡಾ.ಕೆ.ಪಿ.ರಮೇಶ್ ಹೇಳಿದರು.
ಹೊನ್ನಾವರ ಹವ್ಯಕದಲ್ಲಿ ಭಾನುವಾರ ಹಮ್ಮಿಕೊಂಡ ವಿಶಿಷ್ಟ ಮಲೆನಾಡು ಗಿಡ್ಡ ಹಬ್ಬದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, “ಮಲೆನಾಡು ಗಿಡ್ಡ ತಳಿಯ ಹಸುಗಳಲ್ಲಿ ವಿಶ್ವದಲ್ಲಿ ಯಾವ ತಳಿಯ ಹಸುಗಳ ಹಾಲಿನಲ್ಲೂ ಇಲ್ಲದಷ್ಟು ಲ್ಯಾಕ್ಟೋಫಿರಿನ್ ಅಂಶ ಇದೆ. ಪ್ರತಿ ಗ್ರಾಂ ಹಾಲಿನಲ್ಲಿ 300 ಮಿಲಿಗ್ರಾಂವರೆಗೂ ಈ ಅಂಶ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವೂ ಈ ಹಸುವಿನ ಹಾಲಿನಲ್ಲಿದೆ” ಎಂದು ವಿವರಿಸಿದರು.
“ಗೋ ಸಾಕಾಣಿಕೆಯಲ್ಲಿ ತಕ್ಷಣದ ಲಾಭವನ್ನಷ್ಟೇ ನೋಡದೇ, ಜೀವಿತಾವಧಿಯ ಉತ್ಪಾದಕತೆ ಬಗ್ಗೆ ಗಮನ ಹರಿಸಬೇಕು, ಉಳಿದೆಲ್ಲ ತಳಿಗಳಿಗೆ ಹೋಲಿಸಿದರೆ ಜೀವಿತಾವಧಿ ಉತ್ಪಾದಕೆಯೂ ಈ ತಳಿಗಳಲ್ಲಿ ಅತ್ಯಧಿಕ. ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ” ಎಂದು ಹೇಳಿದರು.


ಮಿಶ್ರ ತಳಿಗಳು ಈ ದೇಶದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ. ಆದರೆ ಆಯಾ ಪ್ರದೇಶದಲ್ಲೇ ಶತಮಾನಗಳಿಂದ ಸಾಕಾಣಿಕೆ ಮಾಡಿಕೊಂಡು ಬಂದ ಸ್ಥಳೀಯ ತಳಿಗಳಲ್ಲಿ ರೋಗ ನಿರೋಧಕ ಅಂಶಗಳೂ ಅಧಿಕ. ಮಲೆನಾಡು ಗಿಡ್ಡದಂಥ ತಳಿಗಳು ಯಾವ ವಾತಾವರಣಕ್ಕೂ ಹೊಂದಿಕೊಳ್ಳುವ ಸಾಮಥ್ರ್ಯ ಹೊಂದಿದ್ದು, ಜಾಗತಿಕ ತಾಪಮಾನದಂಥ ಸಮಸ್ಯೆಗೂ ಇಂಥ ತಳಿಗಳು ಪರಿಹಾರವಾಗಲಿವೆ ಎಂದು ವಿಶ್ಲೇಷಿಸಿದರು.
ಭಾರತದ ಬಹಳಷ್ಟು ಕಡೆಗಳಲ್ಲಿ ಇಂದು ಹಾಲಿನ ಉತ್ಪಾದನೆ ಬೇಡಿಕೆಗಿಂತ ಅಧಿಕವಾಗಿದೆ. ಇಷ್ಟಾಗಿಯೂ ಹೈನುಗಾರಿಕೆ ಲಾಭದಾಯಕವಲ್ಲ ಎಂಬ ಸ್ಥಿತಿ ಇದೆ. ಇಂದು ನಾವು ಹಾಲಿನ ಪ್ರಮಾಣಕ್ಕಿಂತ ಹಾಲಿನ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಎ2 ಹಾಲಿಗೆ ಬೇಡಿಕೆ ವಿಶ್ವಾದ್ಯಂತ ಹೆಚ್ಚುತ್ತಿದ್ದು, ಇಂಥ ಅವಕಾಶವನ್ನು ಬಳಸಿಕೊಂಡು, ಭಾರತದಲ್ಲಿ ಎ2 ಹಾಲಿನ ಉತ್ಪಾದನೆ ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.
ಅತಿ ವಿಶಿಷ್ಟವಾದ ಮಲೆನಾಡು ಗಿಡ್ಡ ತಳಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಈ ತಳಿಯ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವಾಗಿ ಭಾರತೀಯ ಹೈನು ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಗೋ ಪರಿವಾರ- ಕರ್ನಾಟಕ, ರೋಟರಿ ಕ್ಲಬ್ ಸಹಯೋಗದಲ್ಲಿ ಈ ವಿಶಿಷ್ಟ ಹಬ್ಬ ಆಯೋಜಿಸಲಾಗಿತ್ತು.
ದಿನವಿಡೀ ನಡೆದ ಹಬ್ಬದಲ್ಲಿ ವಿಚಾರ ಸಂಕಿರಣ, ಮಲೆನಾಡು ಗಿಡ್ಡ ಗೋ ಪ್ರದರ್ಶನ, ಹಾಲಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳ, ಉಚಿತ ಚಿಕಿತ್ಸಾ ಶಿಬಿರ, ಸ್ಪರ್ಧೆಯಂಥ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ರೈತರು ಹಲವು ವಿಷಯಗಳ ಬಗ್ಗೆ ತಜ್ಞರೊಂದಿಗೆ ಸಂವಾದ ನಡೆಸಿದರು. ಆಗಮಿಸಿದ ಎಲ್ಲರಿಗೂ ಮಲೆನಾಡು ಗಿಡ್ಡ ತಳಿಯ ಹಾಲನ್ನು ಉಚಿತವಾಗಿ ವಿತರಿಸಲಾಯಿತು.
ಬೆಳಿಗ್ಗೆ ದಿನೇಶ್ ಶಹರಾ ಫೌಂಡೇಷನ್ನ ಮುಖ್ಯಸ್ಥ ದಿನೇಶ್ ಶಹರಾ ಗೋಪೂಜೆ ನೆರವೇರಿಸಿ ಮಲೆನಾಡು ಗಿಡ್ಡ ಹಬ್ಬಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಉಚಿತ ಚಿಕಿತ್ಸಾ ಶಿಬಿರವನ್ನೂ ಉದ್ಘಾಟಿಸಿದರು. ಫೌಂಡೇಷನ್ನ ಸಿಎಸ್ಆರ್ ವಿಭಾಗದ ಮುಖ್ಯಸ್ಥೆ ಮೀರಾ ಭಾಟಿಯಾ, ಮಹೇಶ್ ಪಟ್ವಾರಿ, ಅಜಯ್ ಮಲ್ಲಿ, ಡಾ.ಅಲ್ಕಾ ಪಟೇಲ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಗೋ ಪರಿವಾರದ ಅಧ್ಯಕ್ಷ ಯೋಗೀಶ್ ರಾಯ್ಕರ್ ನೆರವೇರಿಸಿದರು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜು, ಭಾರತೀಯ ಗೋ ಪರಿವಾರ- ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಂಗನಾಥ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.
ಮಂಜುನಾಥ್ ಸುವರ್ಣಗದ್ದೆ ಪ್ರಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಗೋ ಪರಿವಾರದ ಸಹ ಕಾರ್ಯದರ್ಶಿ ಶಿಶಿರ್ ಹೆಗಡೆ ಸ್ವಾಗತಿಸಿದರು.


ಕಾರ್ಯಾಗಾರದಲ್ಲಿ ಮಲೆನಾಡು ಗಿಡ್ಡ ತಳಿಯ ಅಭಿವೃದ್ಧಿ ಮಾರ್ಗೋಪಾಯಗಳ ಬಗ್ಗೆ ಡಾ.ಕೆ.ಪಿ.ರಮೇಶ್, ಈ ತಳಿಯ ಹಸುಗಳಲ್ಲಿನ ಸಾಮಾನ್ಯ ವಿಷಬಾಧೆಗಳ ಬಗ್ಗೆ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ಬಿಶ್ರೀಧರ್, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಸಾಗರ ಮುಖ್ಯ ಪಶುವೈದ್ಯಾಧಿಕಾರಿ ಡಾ.ಜೆ.ಆರ್.ತಿಮ್ಮಪ್ಪ, ಮಲೆನಾಡು ಗಿಡ್ಡ ಕಾಮಧೇನು ಎಂಬ ವಿಷಯದ ಬಗ್ಗೆ ಡಾ.ಕೆ.ಎಂ.ನಾಗರಾಜ್, ಪಾರಂಪರಿಕ ಚಿಕಿತ್ಸಾ ವಿಧಾನಗಳ ಬಗ್ಗೆ ಶಿರಸಿಯ ಪಶುರೋಗ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾಧಿಕಾರಿ ಡಾ.ಗಣೇಶ್ ಹೆಗಡೆ ವಿಷಯ ಮಂಡಿಸಿದರು.
30 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಇದ್ದ ವಿವಿಧ ಗವ್ಯೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಆಹಾರೋತ್ಸವದಲ್ಲೂ ಜನ ಉತ್ಸಾಹದಿಂದ ಪಾಲ್ಗೊಂಡರು. ವಿವಿಧ ಬಣ್ಣಗಳ, ಜಾತಿಯ 100ಕ್ಕೂ ಹೆಚ್ಚು ಮಲೆನಾಡು ಗಿಡ್ಡ ಹಸುಗಳು ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ನೋಡುಗರಿಗೆ ಅಪೂರ್ವ ಅನುಭವ ನೀಡಿತು.

★ವರದಿ:-
ಶ್ರೀಉದಯ ಶಂಕರ ಮಿತ್ತೂರು
ಅಧ್ಯಕ್ಷರು, ಮಾಧ್ಯಮ ವಿಭಾಗ