ಬರಗಾಲ ಪೀಡಿತ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗೋವುಗಳಿಗೆ ಕಳೆದ ಎರಡು ತಿಂಗಳಿನಿಂದ ಶ್ರೀರಾಮಚಂದ್ರಾಪುರಮಠದ ನೇತೃತ್ವದಲ್ಲಿ ಗೋಪ್ರೇಮಿಗಳ ಸಹಕಾರದಿಂದ ಉಚಿತವಾಗಿ ಮೇವನ್ನು ವಿತರಿಸಲಾಗುತ್ತಿದ್ದು, ಒಟ್ಟು 3000 ಟನ್ ಮೇವನ್ನು 16 ವಿವಿಧ ಕೇಂದ್ರಗಳಲ್ಲಿ ವಿತರಿಸಲಾಗಿದೆ. ಮೇವಿಲ್ಲದೇ ಪ್ರಾಣಾಪಾಯದಲ್ಲಿದ್ದ ಲಕ್ಷಾಂತರ ಗೋವುಗಳಿಗೆ ಜೋಳ – ಕಬ್ಬು – ಅಡಿಕೆ ಹಾಳೆಯನ್ನು ಸೇರಿದಂತೆ ಮೇವನ್ನು ವಿತರಿಸಿದ್ದು, ಈ ಪೈಕಿ 110 ಲೋಡ್ ಮೇವುನ್ನು ಶ್ರೀಮಠದಿಂದ 110 ವರ್ಷದ ಕಾಯಕಯೋಗಿ ಸಿದ್ದಗಂಗಾ ಶ್ರೀಗಳ ಗೌರವಾರ್ಥ ವಿತರಿಸಲಾಯಿತು. ಇಂದು ಸಿದ್ಧಗಂಗಾ ಶ್ರೀಗಳ ಗೌರವಾರ್ಥದ 110ನೇ ಲೋಡ್ ತುಂಬಿದ ಲಾರಿಯ ಮೇವನ್ನು ಚಾಮರಾಜನಗರದ ಪೆದ್ದನಪಾಳ್ಯದ ಗೋವುಗಳಿಗೆ ವಿತರಿಸುವ ಮೂಲಕ ಉದ್ಘೋಶಿಸಿದಂತೆ ಮೇವನ್ನು ವಿತರಿಸಿ ಕಾಯಕಯೋಗಿಗೆ ವಿಶೇಷವಾದ ರೀತಿಯಲ್ಲಿ ಕಾಯಕದ ಮೂಲಕವೇ ಗೌರವಾರ್ಪಣೆ ಸಲ್ಲಿಸಲಾಯಿತು.
ಹಿನ್ನೆಲೆ: ತ್ರಿವಿಧ ದಾಸೋಹಿ, ಕಾಯಕಯೋಗಿ, ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು 110 ನೇ ವರ್ಷದ ಜನ್ಮದಿನದಂದು ಅವರು ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಶ್ರೀಗಳ ಗೌರವಾರ್ಥ ಶ್ರೀರಾಮಚಂದ್ರಾಪುರಮಠದಿಂದ 110 ಲೋಡು ಮೇವನ್ನು ಬರಗಾಲ ಪೀಡಿತ ಗೋವುಗಳಿಗೆ ನೀಡುವುದಾಗಿ ಶ್ರೀಮಠ ಉದ್ಘೋಷಿಸಿತ್ತು. ಈ ಕುರಿತಾಗಿ ತಮ್ಮ ಜನ್ಮದಿನದಂದು ತಿಳಿದ ಸಿದ್ಧಗಂಗಾ ಶ್ರೀಗಳು, ಸಂತೋಷ ವ್ಯಕ್ತಪಡಿಸಿ, ತಕ್ಷಣ ಒಂದು ಹೊರೆ ಹುಲ್ಲನ್ನು ಸಾಂಕೇತಿಕವಾಗಿ ಶ್ರೀರಾಮಚಂದ್ರಾಪುರಮಠದ ಕಾರ್ಯಕರ್ತರಿಗೆ ನೀಡಿದ್ದರು.