ಕೊಡಗಿನ ಬಾಳೆಲೆಯಲ್ಲಿ ನೆರೆಸಂತ್ರಸ್ತರ ಗೋವುಗಳಿಗೆ ಶ್ರೀರಾಮಚಂದ್ರಾಪುರಮಠದ ವತಿಯಿಂದ ಮೇವು ವಿತರಣೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿ ಲಕ್ಷ್ಮಣ ತೀರ್ಥ ಹೊಳೆಯಲ್ಲಿ ಸಂಭವಿಸಿರುವ ನೆರೆನೀರಿನಿಂದ ಊರಿನ ಗೋಮಾಳ ಹುಲ್ಲುಗಾವಲು ಹೊಲಗದ್ದೆ ಇವೆಲ್ಲಾ ಕೊಚ್ಚಿ ನಾಶವಾಗಿರುವ ಕಳವಳಕಾರೀ ಘಟನೆ ಜರಗಿದೆ. ಬಾಳೆಲೆ ಗ್ರಾಮದ ಕೃಷಿಕರೆಲ್ಲಾ ಗೋ ಆಧಾರಿತ ಕೃಷಿಕರಾಗಿದ್ದು ಇಲ್ಲಿ ನೆರೆಯಿಂದಾಗಿ ಗೋವುಗಳಿಗೆ ಮೇವಿಲ್ಲದಾಗಿರುವ ದುರಂತ ಸಂಭವಿಸಿತು.

ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಂತೆ ಬಾಳೆಲೆ ಊರಿನ ಗೋವುಗಳಿಗೆ ಮೇವಿನ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಲಾಯಿತು. ಶ್ರೀರಾಮಚಂದ್ರಾಪುರಮಠದ ಗೋರಕ್ಷಾ ಯೋಜನೆಯ ಕಾಮದುಘಾ ಸಂಚಾಲಕರಾಗಿರುವ ಡಾ ವೈ ವಿ ಕೃಷ್ಣಮೂರ್ತಿಯವರ ಸಂಯೋಜನೆಯಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಕೊಡಗು ವಲಯ ಅಧ್ಯಕ್ಷರಾದ ಕೆ ಆರ್ ನಾರಾಯಣಮೂರ್ತಿ ಇವರ ಜವಾಬ್ದಾರಿಯಲ್ಲಿ ಲಾರಿಯಲ್ಲಿ ಹುಲ್ಲನ್ನು ಸಾಗಿಸಿ ತಲಪಿಸಲಾಯಿತು.

ಕೊಡಗು ವಲಯ ಸಹಾಯ ವಿಭಾಗ ಪ್ರಧಾನ ಕೆ ಯಸ್ ಗೋಪಾಲಕೃಷ್ಣ, ಸೇವಾ ವಿಭಾಗ ಪ್ರಧಾನ ಕೆ ಯಸ್ ಉದಯಕುಮಾರ, ಪಾಲಂಗಾಲ ಘಟಕ ಗುರಿಕ್ಕಾರ ಪಿ ಯನ್ ನಾಗರಾಜ, ಚೆಯ್ಯಂಡಾಣೆ ನರಿಯಂದಡ ಗ್ರಾಮಪಂಚಾಯತೀ ಉಪಾಧ್ಯಕ್ಷ ಶರಣು ರತೀಶ್, ಬಾಳೆಲೆ ಗ್ರಾಮ ಪಂಚಾಯತೀ ಸದಸ್ಯರು, ಗೋಪರಿವಾರ ಸದಸ್ಯ ಅಚ್ಚುತ, ಕನ್ನಂಬಾಡಿ ಶ್ರೀ ಲಕ್ಷ್ಮೀದೇವಸ್ಥಾನದ ಅಧ್ಯಕ್ಷ ರಘುಶ್ರೀಕಂಠಪ್ಪ, ಪಶುವೈದ್ಯಾಧಿಕಾರಿ ಭವಿಷ್ಯ ಕುಮಾರ್, ಗ್ರಾಮಸ್ಥರು ಮೊದಲಾದವರು ಈ ಕಾರ್ಯದಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಿ ಸಹಕರಿಸಿದರು. ಶ್ರೀ ಅಚ್ಚುತ ಇವರು ಮಾತನಾಡಿ ನೆರೆಯಿಂದ ಗೋವಿಗೆ ಮೇವಿಲ್ಲದಾದ ಈ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರಮಠದ ವತಿಯಿಂದ ಮೇವು ದೊರಕಿಸಿದ್ದಕ್ಕೆ ಧನ್ಯವಾದಸಾಮರ್ಪಿಸಿದರು.

ಊರಿನ ಕೃಷಿಕರಾದ ಶ್ರೀ ರಘುಶ್ರೀಕಂಠಪ್ಪನವರು ತಮ್ಮ ಮುಕ್ತವಾದ ಅನಿಸಿಕೆಯನ್ನು ಈ ರೀತಿಯಲ್ಲಿ ಹಂಚಿಕೊಂಡರು ” ನನ್ನ ಇಬ್ಬರು ಮಕ್ಕಳು ಹಾಗೂ ನಾವು ಗೋಸೇವೆ ಮಾಡುತ್ತಾ ಬರುತ್ತಿದ್ದು ನಮ್ಮ ಹಟ್ಟಿಯಲ್ಲಿ ೪೦ ದೇಸೀ ಹಸುಗಳಿದ್ದು ವರ್ಷದಲ್ಲಿ ೪೦ ರಿಂದ ೫೦ ಟ್ರಾಕ್ಟರ್ ಸಗಣಿ, ಗೊಬ್ಬರ, ದಿನದಲ್ಲಿ ೩೫ ರಿಂದ ೪೦ ಲೀ ಹಾಲು ಮಾರಾಟ ಮಾಡುತ್ತಾ ನಮ್ಮ ಕುಟುಂಬ ಜೀವನವು ಗೋವುಗಳಿಂದಾಗಿ ಸುಖವಾಗಿ ನೆಮ್ಮದಿಯಿಂದ ಇದ್ದೆವು. ಇದೀಗ ನೆರೆಯಿಂದ ದಾರಿಕಾಣದ ಪರಿಸ್ಥಿತಿಯಲ್ಲಿದ್ದಾಗ ಶ್ರೀರಾಮಚಂದ್ರಾಪುರಮಠದ ವತಿಯಿಂದ ಒದಗಿಬಂದಿರುವ ಈ ಸಹಾಯದಿಂದ ನಾವು ಧನ್ಯರಾಗಿದ್ದೇವೆ “

ಕೃಷಿಕರಾಗಿರುವ ಲಕ್ಷ್ಮೀಕಾಂತ ಇವರು ಮಾತನಾಡುತ್ತಾ ” ನಮ್ಮಲ್ಲಿ ೩೫ ರಾಸುಗಳಿದ್ದು ಸುಮಾರು ೨೫ ಎಕ್ರೆಯಷ್ಟು ಗದ್ದೆ ಬೇಸಾಯ ಮಾಡಿ ಹುಲ್ಲು ಉತ್ಪಾದಿಸುತ್ತಿದ್ದೆವು. ಪ್ರತೀ ವರ್ಷ ೧೦ ಸಾವಿರದಷ್ಟು ಹುಲ್ಲು ಕಂತೆಗಳನ್ನು ಊರಿನಲ್ಲಿ ಗೋಸಾಕುವವರಿಗೆ ಕೊಡುತ್ತಿದ್ದೆ. ಈ ಸಲದ ನೆರೆಯಲ್ಲಿ ಸರ್ವವೂ ಕೊಚ್ಚಿಕೊಂಡುಹೋಗಿದ್ದು ನಮ್ಮ ದನಗಳಿಗೆ ಮೇವಿಲ್ಲದಂತಾಯಿತು ಎಂದು ದುಃಖ ತೋಡಿಕೊಂಡರು. ದೇವರು ಕರುಣೆ ತೋರಿದ್ದೇ ಆದಲ್ಲಿ ಬರುವ ವರ್ಷ ನಾನು ೧ ಲೋಡು ಮೇವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಕೊಡುತ್ತೇನೆ. ಇಂತಹ ಕಷ್ಟದ ಸಂದರ್ಭದಲ್ಲಿ ಮೇವನ್ನು ವಿತರಿಸಿದ ಶ್ರೀರಾಮಚಂದ್ರಾಪುರಮಠಕ್ಕೆ ಕೃತಜ್ಞತೆ ” ಎಂಬುದಾಗಿ ಭಾವನಾತ್ಮಕವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸುಮಾರು ೧೯೬೨ ನೇ ಇಸವಿಯಲ್ಲಿ ಮೊದಲು ಈ ರೀತಿಯ ನೆರೆ ಬಂದಿತ್ತು ಎಂಬುದಾಗಿ ನೆನಪನ್ನು ಪುನಃಸ್ಮರಿಸಿದರು.

ಪಶುವೈದ್ಯಾಧಿಕಾರಿಗಳು ಮಾತನಾಡಿ ಕೊಡಗಿನ ಬಾಳೆಲೆಗೆ ತುರ್ತು ಸಮಯದಲ್ಲಿ ಶ್ರೀ ರಾಮಚಂದ್ರಾಪುರಮಠವು ಪಶು ಆಹಾರವನ್ನು ಕಳುಸಿದ್ದು ನಿಜವಾದ ಸಂತ್ರಸ್ತರಿಗೆ ಅರ್ಹರಿಗೆ ದೊರಕಿದೆ ಎಂದು ಹೇಳಿದರು. ಯಂ ಯಸ್ ಶಿವನಂಜಪ್ಪ, ಯಸ್ ಯಸ್ ರಘುಶ್ರೀಕಂಠಪ್ಪ, ನಂದಕುಮಾರ್, ಬಿ ಯಸ್ ಸುರೇಂದ್ರ, ಸುಂದರೇಶ್, ಗಜಾನನ, ನರಸಿಂಹ ರಾವ್, ಬಿ ಜಿ ರಾಮಕೃಷ್ಣ , ನಿಖಿಲ್, ಲಕ್ಷ್ಮಿ ಕಾಂತ್, ಕೇಶವ ಮೂರ್ತಿ, ರಿವೀನ ಮೊದಲಾದ ಊರ ಗೋಪಾಲಕರಿಗೆ ಮೇವನ್ನು ವಿತರಿಸಲಾಯಿತು.

ಮೈಸೂರಿನ ಕೆ ಆರ್ ನಗರದ ಮಹದೇವಪ್ಪ ಮತ್ತು ತಂಡದವರು ಉಚಿತವಾಗಿ ಮೇವಿನ ಹುಲ್ಲನ್ನು ಒದಗಿಸಿ ಸಹಕರಿಸಿದರು.ಶ್ರೀರಾಮಚಂದ್ರಾಪುರಮಠದ ಗೋಪರಿವಾರ ಹಾಗೂ ನೆರೆ ಸಂತ್ರಸ್ತರಿಗೆ ಸಹಾಯಕ್ಕಾಗಿ ಇರುವ ಸಹಾಯ ನಿಧಿಯ ಮೂಲಕ‌ ಮೈಸೂರಿನಿಂದ ಲಾರಿಯಲ್ಲಿ ಮೇವು ಸಾಗಾಟ ಮಾಡಲಾಯಿತು. ಶ್ರೀಕೃಷ್ಣ ಭಟ್ ಮೀನಗದ್ದೆ ಮತ್ತು ಚಾಲಕರಾದ ಹರೀಶ ಇವರು ಸಹಕರಿಸದರು.

ವಿ ಸೂ ; ನೆರೆಯಿಂದ ಮೇವಿಲ್ಲದಾಗಿರುವ ಗೋವುಗಳಿಗೆ ಮೇವಿನ ಪೂರೈಕೆಯ ಅನಿವಾರ್ಯತೆಯಿದೆ. ಆದುದರಿಂದ ಈ ಪುಣ್ಯ ಸೇವೆಗೆ ದೇಣಿಗೆ ಸಮರ್ಪಿಸಬಹುದಾಗಿದೆ.
ಸಂಪರ್ಕ ಮಾಹಿತಿ ; ಆರ್ ಕೆ ಬೆಳ್ಳಾರೆ – 90350 48212
ಡಾ ವೈ ವಿ ಕೃಷ್ಣಮೂರ್ತಿ : 9449595206